ಬೆಂಗಳೂರು: ಕೋಟಕ್ ಮಹೀಂದ್ರಾ ಗ್ರೂಪ್ ಮತ್ತು ಕೋಟಕ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು ನೀಡಲು ‘ಕೋಟಕ್ ಕನ್ಯಾ ವಿದ್ಯಾರ್ಥಿವೇತನ-2025’ (Kotak Kanya Scholarship 2025) ಯೋಜನೆ ಘೋಷಣೆ ಮಾಡಿದೆ. ಇದರ ಅನ್ವಯ ಬಡ ಹೆಣ್ಣುಮಕ್ಕಳು 1.5 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ. ವಿದ್ಯಾರ್ಥಿ ವೇತನಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಯಾವ ಕೋರ್ಸ್ ಮಾಡಿದವರಿಗೆ ಅನುಕೂಲ?
ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗುವುದು ಉದ್ದೇಶವಾಗಿದೆ. ಅದರಂತೆ, ಎಂಜಿನಿಯರಿಂಗ್, ವೈದ್ಯಕೀಯ (MBBS), ಕಾನೂನು (LLB), ಸಂಶೋಧನೆ (BS-MS), ವಿನ್ಯಾಸ, ವಾಸ್ತುಶಿಲ್ಪ ಸೇರಿ ಹಲವು ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಟ್ಯೂಷನ್ ಫೀಸ್, ಹಾಸ್ಟೆಲ್ ಶುಲ್ಕ, ಪುಸ್ತಕ, ಲ್ಯಾಪ್ ಟಾಪ್ ಸೇರಿ ಹಲವು ರೀತಿಯ ವೆಚ್ಚಗಳನ್ನು ಭರಿಸಲು ವರ್ಷಕ್ಕೆ 1.5 ಲಕ್ಷ ರೂಪಾಯಿ ಸ್ಕಾಲರ್ ಶಿಪ್ ನೀಡಲಾಗುತ್ತದೆ. www.buddy4study.com ವೆಬ್ ಸೈಟ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡಗಳು ಏನು?
- ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.
- ಪಿಯುಸಿಯಲ್ಲಿ ಕನಿಷ್ಠ 75% ಅಂಕ ಪಡೆದಿರಬೇಕು.
- ಮೇಲೆ ಉಲ್ಲೇಖಿಸಿದ ಕೋರ್ಸ್ ಗಳಿಗೆ ಪ್ರಸಕ್ತ ವರ್ಷದಲ್ಲಿ ಸೇರ್ಪಡೆಯಾಗಿರಬೇಕು
- ವಿದ್ಯಾರ್ಥಿನಿಯರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
- ಕೋಟಕ್ ಗ್ರೂಪ್ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ
ಯಾವ ದಾಖಲೆ ಸಲ್ಲಿಸಬೇಕು?
ಆಧಾರ್ ಕಾರ್ಡ್, ಗುರುತಿನ ಚೀಟಿ, ಪಿಯುಸಿ ಮಾರ್ಕ್ಸ್ ಕಾರ್ಡ್, ಕಾಲೇಜು ಪ್ರವೇಶ ದೃಢೀಕರಣ ಸರ್ಟಿಫಿಕೇಟ್, ಕುಟುಂಬದ ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಸೈಜಿನ ಫೋಟೋ, ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ ನೀಡಬೇಕು. ಹೆಚ್ಚಿನ ಮಾಹಿತಿಗೆ 011-430-92248 ಸಂಖ್ಯೆಗೆ ಕರೆ ಮಾಡಬಹುದು.



















