ಯೆಮೆನ್ ನಾಗರಿಕ ತಲಾಲ್ ಅಬ್ದೋ ಮೆಹದಿಯ ಹತ್ಯೆಯ ಆರೋಪ ಹೊತ್ತಿರುವ ಕೇರಳದ ಪಾಲಕ್ಕಾಡ್ ಮೂಲದ ನರ್ಸ್ ನಿಮಿಷಾ ಪ್ರಿಯಾಳನ್ನು ಇದೇ 16ರಂದು ಗಲ್ಲಿಗೇರಿಸಲು ಯೆಮೆನ್ ಸರ್ಕಾರ ನಿರ್ಧರಿಸಿದೆ. 37 ವರ್ಷದ ನಿಮಿಷಾ ಪ್ರಿಯಾರನ್ನು ಜುಲೈ 16ರಂದು ಗಲ್ಲಿಗೇರಿಸಲಾಗುವುದು ಎಂದು ಮಾನವಹಕ್ಕು ಕಾರ್ಯಕರ್ತ ಸ್ಯಾಮುಯೆಲ್ ಜೆರೋಮ್ ಬಾಸ್ಕರನ್ ದೃಢಪಡಿಸಿದ್ದಾರೆ, ಆದರೆ ನಿಮಿಷಾಳ ಕುಟುಂಬದವರು ಮತ್ತು “ಸೇವ್ ನಿಮಿಷಾ ಪ್ರಿಯಾ ಆಕ್ಷನ್ ಕೌನ್ಸಿಲ್” ಇದನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
ಯಾರು ಈ ನಿಮಿಷಾ ಪ್ರಿಯಾ?
ನಿಮಿಷಾ ಪ್ರಿಯಾ ಕೇರಳದ ಪಾಲಕ್ಕಾಡ್ ಜಿಲ್ಲೆಯವರು. ತಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಅವರು 2008ರಲ್ಲಿ ಕೆಲಸಕ್ಕೆಂದು ಯೆಮೆನ್‌ಗೆ ತೆರಳಿದರು. ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಯೆಮೆನ್‌ನ ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರು. 2014ರಲ್ಲಿ, ಯೆಮೆನ್‌ನ ವ್ಯಾಪಾರ ಕಾನೂನಿನ ಪ್ರಕಾರ, ವಿದೇಶಿಯರಿಗೆ ಸ್ಥಳೀಯ ಒಡನಾಡಿಯ ಅಗತ್ಯವಿರುವುದರಿಂದ, ತಲಾಲ್ ಅಬ್ದೋ ಮೆಹದಿಯ ಜೊತೆಗೆ ಸನಾದಲ್ಲಿ ಕ್ಲಿನಿಕ್ ತೆರೆಯಲು ನಿಮಿಷಾ ಒಪ್ಪಂದ ಮಾಡಿಕೊಂಡರು.
2015ರಲ್ಲಿ ಈ ಕ್ಲಿನಿಕ್ ಆರಂಭವಾಯಿತು, ಆದರೆ ತಲಾಲ್ ಅವರು ಕ್ಲಿನಿಕ್‌ನ ಒಡೆತನದ ದಾಖಲೆಗಳನ್ನು ಕುತಂತ್ರದಿಂದ ಬದಲಾಯಿಸಿದರು, ಮಾತ್ರವಲ್ಲದೇ ನಿಮಿಷಾಳ ಮಾಸಿಕ ಆದಾಯದಿಂದ ಹಣವನ್ನು ಪೀಕಲು ಆರಂಭಿಸಿದರು ಎಂದು ಹೇಳಲಾಗಿದೆ. ಇದಲ್ಲದೆ, ತಲಾಲ್ ಅವರು ನಿಮಿಷಾಳಿಗೆ ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿಯೂ ಕಿರುಕುಳ ನೀಡತೊಡಗಿದರು ಎಂಬ ಆರೋಪವೂ ಇದೆ.
ನಿಮಿಷಾಗೆ ಮುಳುವಾಯ್ತು ಇಂಜೆಕ್ಷನ್ ಓವರ್ ಡೋಸ್
2017ರ ಜುಲೈನಲ್ಲಿ, ನಿಮಿಷಾ ತನ್ನ ಪಾಸ್‌ಪೋರ್ಟ್ ಅನ್ನು ತಲಾಲ್‌ನಿಂದ ಮರಳಿ ಪಡೆಯಲು ಯತ್ನಿಸಿದರು. ಆದರೆ, ಆತ ಅದನ್ನು ಕೊಡಲು ಒಪ್ಪಲಿಲ್ಲ. ಹೇಗಾದರೂ ಮಾಡಿ ತನ್ನ ಪಾಸ್ಪೋರ್ಟ್ ಪಡೆದೇ ತೀರಬೇಕೆಂದು ನಿರ್ಧರಿಸಿದ ನಿಮಿಷಾ, ಒಂದು ದಿನ ತಲಾಲ್‌ಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಿದರು. ಆದರೆ ದುರದೃಷ್ಟವಶಾತ್ ಇಂಜೆಕ್ಷನ್ ಓವರ್‌ಡೋಸ್ ಆಗಿ ತಲಾಲ್ ಸಾವನ್ನಪ್ಪಿದರು. ನಿಮಿಷಾ ಮತ್ತು ಯೆಮೆನ್‌ನ ಮತ್ತೊಬ್ಬ ಮಹಿಳೆ ಹನಾನ್ ಸೇರಿಕೊಂಡು ತಲಾಲ್‌ನ ದೇಹವನ್ನು ತುಂಡರಿಸಿ ನೀರಿನ ಟ್ಯಾಂಕ್‌ನಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ನಂತರ, ಪ್ರಕರಣಕ್ಕೆ ಸಂಬಂಧಿಸಿ ನಿಮಿಷಾಳನ್ನು 2018ರಲ್ಲಿ ಬಂಧಿಸಲಾಯಿತು, 2020ರಲ್ಲಿ ಸನಾದ ವಿಚಾರಣಾ ನ್ಯಾಯಾಲಯ ಅವರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿತು. 2023ರ ನವೆಂಬರ್‌ನಲ್ಲಿ ಯೆಮೆನ್‌ನ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಿತು. ಆದರೆ ಶರಿಯಾ ಕಾನೂನಿನಡಿ ತಲಾಲ್‌ನ ಕುಟುಂಬಕ್ಕೆ “ದಿಯಾ” (ಬ್ಲಡ್ ಮನಿ) ಅಂದರೆ ಪರಿಹಾರ ಮೊತ್ತ ಪಾವತಿಸಿದರೆ, ಆ ಕುಟುಂಬವು ಅಪರಾಧಿಯನ್ನು ಕ್ಷಮಿಸಿದರೆ ನಿಮಿಷಾ ಪ್ರಿಯಾಗೆ ಕ್ಷಮಾದಾನ ಪಡೆಯುವ ಅವಕಾಶವನ್ನು ತೆರೆದಿಟ್ಟಿತು.
2024ರ ಡಿಸೆಂಬರ್ 30ರಂದು, ಯೆಮೆನ್‌ನ ಅಧ್ಯಕ್ಷ ರಶಾದ್ ಅಲ್-ಅಲಿಮಿ ನಿಮಿಷಾಳ ಮರಣದಂಡನೆಗೆ ಅಂತಿಮ ಒಪ್ಪಿಗೆ ನೀಡಿದರು. ಈಗ ಇದೇ ತಿಂಗಳ (ಜುಲೈ) 16ರಂದು ನಿಮಿಷಾ ಪ್ರಿಯಾಳನ್ನು ಗಲ್ಲಿಗೇರಿಸುವ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಯೆಮೆನ್‌ನ ಸಾರ್ವಜನಿಕ ಪ್ರಾಸಿಕ್ಯೂಟರ್ ಜೈಲು ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ.
ಸೇವ್ ನಿಮಿಷಾ ಅಭಿಯಾನ
ನಿಮಿಷಾಳನ್ನು ರಕ್ಷಿಸಲು “ಸೇವ್ ನಿಮಿಷಾ ಪ್ರಿಯಾ ಆಕ್ಷನ್ ಕೌನ್ಸಿಲ್” ಮತ್ತು ಮಾನವಹಕ್ಕು ಕಾರ್ಯಕರ್ತ ಸ್ಯಾಮುಯೆಲ್ ಜೆರೋಮ್ ಅವರು ತಲಾಲ್‌ನ ಕುಟುಂಬದೊಂದಿಗೆ ಬ್ಲಡ್ ಮನಿ ಬಗ್ಗೆ ಮಾತುಕತೆಯನ್ನು ನಡೆಸುತ್ತಿದ್ದಾರೆ. ಈ ಮಾತುಕತೆಗಳು ಇದುವರೆಗೆ ಯಶಸ್ವಿಯಾಗಿಲ್ಲ. ಆದರೆ ಜುಲೈ 16ರ ಮೊದಲು ಕೊನೆಯ ಪ್ರಯತ್ನವಾಗಿ ಮತ್ತೊಮ್ಮೆ ಚರ್ಚೆಗೆ ಯತ್ನಿಸಲಾಗುವುದು ಎಂದು ಕೌನ್ಸಿಲ್ ತಿಳಿಸಿದೆ. ಸ್ಯಾಮುಯೆಲ್ ಜೆರೋಮ್, ಯೆಮೆನ್‌ಗೆ ತೆರಳಿ ಈ ಮಾತುಕತೆಯನ್ನು ಮುಂದುವರಿಸಲು ಯೋಜಿಸಿದ್ದಾರೆ.
ನಿಮಿಷಾಳ ತಾಯಿ ಪ್ರೇಮಾ ಕುಮಾರಿ, 2024ರ ಏಪ್ರಿಲ್ 23ರಿಂದ ಯೆಮೆನ್‌ನ ಸನಾದಲ್ಲಿ ಇದ್ದು, ತಮ್ಮ ಮಗಳ ಜೀವ ಉಳಿಸಲು ಶ್ರಮಿಸುತ್ತಿದ್ದಾರೆ. ಆದರೆ, ಕುಟುಂಬವು 2015ರಲ್ಲಿ ಕ್ಲಿನಿಕ್ ಆರಂಭಿಸಲು ತೆಗೆದುಕೊಂಡ 60 ಲಕ್ಷ ರೂಪಾಯಿಗಳ ಸಾಲದಿಂದಾದಿ ಆರ್ಥಿಕ ಒತ್ತಡದಲ್ಲಿ ಸಿಲುಕಿದೆ.
ಭಾರತ ಸರ್ಕಾರದ ಪಾತ್ರ
ಭಾರತ ಸರ್ಕಾರವು ನಿಮಿಷಾಳ ಪ್ರಕರಣವನ್ನು 2018ರಿಂದಲೂ ಗಂಭೀರವಾಗಿ ಪರಿಶೀಲಿಸುತ್ತಿದೆ. ವಿದೇಶಾಂಗ ಸಚಿವಾಲಯವು ಸ್ಥಳೀಯ ಅಧಿಕಾರಿಗಳು ಮತ್ತು ನಿಮಿಷಾಳ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಈ ವರ್ಷದ ಜನವರಿಯಲ್ಲಿ, ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಸರ್ಕಾರವು ಎಲ್ಲ ಸಾಧ್ಯವಾದ ಸಹಾಯವನ್ನು ನೀಡುತ್ತಿದೆ ಎಂದು ತಿಳಿಸಿದ್ದರು. ಆದರೂ, ಯೆಮೆನ್‌ನ ಹೌತಿ-ನಿಯಂತ್ರಿತ ನ್ಯಾಯಾಲಯದಲ್ಲಿ ನಿಮಿಷಾಳಿಗೆ ನ್ಯಾಯ ಒದಗಿಸುವುದು ಸುಲಭದ ಮಾತಲ್ಲ. ಬ್ಲಡ್ ಮನಿ ಮಾತುಕತೆ ಈಗ ಉಳಿದಿರುವ ಕೊನೆಯ ಭರವಸೆಯಾಗಿದೆ.
ಕೊನೆಯ ಭರವಸೆ
ನಿಮಿಷಾಳ ಜೀವ ಉಳಿಸಲು ಬ್ಲಡ್ ಮನಿ ಮಾತುಕತೆಯು ಏಕೈಕ ಮಾರ್ಗವಾಗಿದೆ. ನಿಮಿಷಾಳ ಪ್ರಕರಣವು ಯೆಮೆನ್‌ನ ಶರಿಯಾ ಕಾನೂನಿನಡಿಯಲ್ಲಿ ನಡೆಯುತ್ತಿದೆ. ಅದರಂತೆ, ನಿಮಿಷಾಳಿಂದ ಹತ್ಯೆಗೀಡಾದ ವ್ಯಕ್ತಿಯ ಕುಟುಂಬಕ್ಕಷ್ಟೇ ಆಕೆಗೆ ಕ್ಷಮಾದಾನ ನೀಡುವ ಅಧಿಕಾರವಿರುವುದು. ಸೇವ್ ನಿಮಿಷಾ ಪ್ರಿಯಾ ಆಕ್ಷನ್ ಕೌನ್ಸಿಲ್ ಈ ದಿಶೆಯಲ್ಲಿ ಶ್ರಮಿಸುತ್ತಿವೆ. ಆದರೆ, ತಲಾಲ್‌ನ ಕುಟುಂಬವು ಇದುವರೆಗೆ ಪರಿಹಾರ ಮೊತ್ತವನ್ನು ಸ್ವೀಕರಿಸಲು ಒಪ್ಪಿಕೊಂಡಿಲ್ಲ. ಅವರು ಒಪ್ಪಿದರೆ ಮಾತ್ರವೇ ನಿಮಿಷಾ ಪ್ರಿಯಾ ನೇಣಿನ ಕುಣಿಕೆಯಿಂದ ಪಾರಾಗಲು ಸಾಧ್ಯ.



















