ವಾಷಿಂಗ್ಟನ್/ಹೈದರಾಬಾದ್: ಅಮೆರಿಕದ ಡಲ್ಲಾಸ್‌ನಲ್ಲಿ ರಜೆಯನ್ನು ಆನಂದಿಸಲೆಂದು ತೆರಳಿದ್ದ ಹೈದರಾಬಾದ್‌ನ ಕುಟುಂಬವೊಂದು ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವು ಕಂಡಿದೆ. ತೇಜಸ್ವಿನಿ, ಶ್ರೀ ವೆಂಕಟ್ ಮತ್ತು ಅವರ ಇಬ್ಬರು ಮಕ್ಕಳು, ಜಾರ್ಜಿಯಾದ ಅಟ್ಲಾಂಟಾದಲ್ಲಿ ಸಂಬಂಧಿಕರನ್ನು ಭೇಟಿಯಾಗಿ ಡಲ್ಲಾಸ್‌ಗೆ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಎಲ್ಲ ನಾಲ್ವರೂ ಕಾರಿನೊಳಗೇ ಸಜೀವ ದಹನವಾಗಿದ್ದಾರೆ.
ಜುಲೈ 7 ರಂದು, ಗ್ರೀನ್ ಕೌಂಟಿಯಲ್ಲಿ ಈ ಕುಟುಂಬದ ಕಾರಿಗೆ ರಾಂಗ್ ರೂಟ್ ನಲ್ಲಿ ಬಂದ ಮಿನಿ ಟ್ರಕ್‌ವೊಂದು ಡಿಕ್ಕಿಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನೊಳಗಿದ್ದ ನಾಲ್ವರೂ ಸುಟ್ಟು ಕರಕಲಾಗಿದ್ದಾರೆ. ಕಾರು ಸಂಪೂರ್ಣವಾಗಿ ಭಸ್ಮವಾಗಿದ್ದು, ಶವಗಳು ಗುರುತಿಸಲಾಗದ ಸ್ಥಿತಿಗೆ ತಲುಪಿವೆ. ಹೀಗಾಗಿ, ಶವಗಳ ಗುರುತನ್ನು ಖಚಿತಪಡಿಸಲು ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದ ಹಿನ್ನೆಲೆ
ಸಾವನ್ನಪ್ಪಿದ ವೆಂಕಟ್ ಬೆಜುಗಾಮ್, ತೇಜಸ್ವಿನಿ ಚೊಲೇಟಿ ಮತ್ತು ಅವರ ಇಬ್ಬರು ಮಕ್ಕಳಾದ ಸಿದ್ದಾರ್ಥ್ ಮತ್ತು ಮೃದ ಬೆಜುಗಾಮ್ ಹೈದರಾಬಾದ್‌ನ ಸುಚಿತ್ರಾ ಪ್ರದೇಶದ ನಿವಾಸಿಗಳಾಗಿದ್ದು, ಡಲ್ಲಾಸ್‌ನ ಸಮೀಪದ ಆಬ್ರೆಯ ಸಟನ್ ಫೀಲ್ಡ್ಸ್ ನಲ್ಲಿ ವಾಸವಾಗಿದ್ದರು. ಈ ಕುಟುಂಬವು ಕೆಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿತ್ತು ಎಂದು ವರದಿಗಳು ತಿಳಿಸಿವೆ.
ಅಮೆರಿಕಾದ ಸ್ಥಳೀಯ ಅಧಿಕಾರಿಗಳು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ಹೈದರಾಬಾದ್‌ಗೆ ವಾಪಸ್ ಕೊಂಡೊಯ್ಯಲು ಏರ್ಪಾಟುಗಳನ್ನು ಮಾಡುತ್ತಿದ್ದಾರೆ. ಡಿಎನ್‌ಎ ಪರೀಕ್ಷೆಗಳು ಪೂರ್ಣಗೊಂಡ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಹೈದರಾಬಾದ್‌ನಲ್ಲಿ ಕುಟುಂಬದ ಸಂಬಂಧಿಕರು ಅಂತಿಮ ವಿಧಿವಿಧಾನಗಳಿಗಾಗಿ ಭಾರತೀಯ ಸರ್ಕಾರದ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ, ಟೆಕ್ಸಾಸ್‌ನ ಆನ್ನಾದಲ್ಲಿ ನಾಲ್ವರು ಭಾರತೀಯರು ಸಂಚರಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿಯಾಗಿ ಎಲ್ಲ ನಾಲ್ವರೂ ಸಜೀವ ದಹನವಾಗಿದ್ದರು. ಆಗಸ್ಟ್ 2024ರಲ್ಲಿ, ಟೆಕ್ಸಾಸ್‌ನಲ್ಲಿ ಭಾರತೀಯ ಮೂಲದ ದಂಪತಿ ಮತ್ತು ಅವರ ಮಗಳು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು, ಆದರೆ ಅವರ ಹದಿಹರೆಯದ ಮಗ ಬದುಕುಳಿದಿದ್ದ. ಪ್ರಸಕ್ತ ವರ್ಷದ ಮೇ ತಿಂಗಳಲ್ಲಿ, ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳಾದ ಮಾನವ್ ಪಟೇಲ್ (20) ಮತ್ತು ಸೌರವ್ ಪ್ರಭಾಕರ್ (23) ನ್ಯೂಯಾರ್ಕ್‌ನ ಈಸ್ಟ್ ಕೊಕಾಲಿಕೊ ಟೌನ್‌ಶಿಪ್‌ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.