ಬೆಂಗಳೂರು: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೆ ಶೀಘ್ರದಲ್ಲೇ ಮೊತ್ತೊಂದು ಬೆಲಯೇರಿಕೆಯ ಬಿಸಿ ತಾಗಲಿದೆ. ಇದೇ ವರ್ಷಾಂತ್ಯದ ವೇಳೆಗೆ ದೇಶಾದ್ಯಂತ ಮೊಬೈಲ್ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಜಾಸ್ತಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ವರ್ಷಾಂತ್ಯದ ವೇಳೆಗೆ ರಿಚಾರ್ಜ್ ಪ್ಲಾನ್ ಗಳ ಬೆಲೆಯಲ್ಲಿ ಶೇ.10-12ರಷ್ಟು ಜಾಸ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
2024ರ ಜುಲೈ ತಿಂಗಳಲ್ಲಿ ಮೂಲ ರೀಚಾರ್ಜ್ ಬೆಲೆಗಳನ್ನು ಸರಾಸರಿ 11% ರಿಂದ 23% ರಷ್ಟು ಹೆಚ್ಚಿಸಲಾಗಿತ್ತು. ರಿಲಯನ್ಸ್ ಜಿಯೋ, ಏರ್ ಟೆಲ್ ಸೇರಿ ಹಲವು ಕಂಪನಿಗಳು ಪ್ಲಾನ್ ಗಳ ಬೆಲೆಯನ್ನು ಜಾಸ್ತಿ ಮಾಡಿದ್ದವು. ಈಗ ಮತ್ತೆ ಜಿಯೋ, ಏರ್ ಟೆಲ್ ಸೇರಿ ವಿವಿಧ ಕಂಪನಿಗಳು ಬೆಲೆಯೇರಿಕೆ ಮಾಡಲಿವೆ ಎಂದು ತಿಳಿದುಬಂದಿದೆ.
ಏಕೆ ಬೆಲೆ ಏರಿಕೆ?
ದೇಶಾದ್ಯಂತ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಚಂದಾದಾರರ ಪ್ರಮಾಣ ದಾಖಲೆ ಮಟ್ಟದಲ್ಲಿ ಜಾಸ್ತಿಯಾಗುತ್ತಿದೆ. ಅಲ್ಲದೆ, ಸಣ್ಣ ನಗರಗಳಿಗೂ 5ಜಿ ಇಂಟರ್ ನೆಟ್ ಸೇವೆಯನ್ನು ವಿಸ್ತರಿಸಲಾಗುತ್ತದೆ. ಹಾಗಾಗಿ, ರಿಚಾರ್ಜ್ ಪ್ಲಾನ್ ಗಳ ಬೆಲೆಯೇರಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ರಿಚಾರ್ಜ್ ಪ್ಲಾನ್ ಗಳ ಬೆಲೆಯೇರಿಕೆಯಾದರೂ ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಜಾಸ್ತಿಯಾಗುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಕಳೆದ ಮೇ ತಿಂಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ಒಂದೇ ತಿಂಗಳಲ್ಲಿ 74 ಲಕ್ಷ ಹೊಸ ಚಂದಾದಾರಿಕೆಗಳು ಸೇರ್ಪಡೆಯಾಗಿವೆ. ಕಳೆದ 29 ತಿಂಗಳಲ್ಲಿ ಇದು ಗರಿಷ್ಠ ಸಂಖ್ಯೆಯಾಗಿದೆ ಎಂಬುದು ಗಮನಾರ್ಹ. ಇದರಿಂದ ಒಟ್ಟು ಸಕ್ರಿಯ ಚಂದಾದಾರರ ಸಂಖ್ಯೆ ಬರೋಬ್ಬರಿ 108 ಕೋಟಿ ತಲುಪಿದೆ. ಹಾಗಾಗಿ, ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್ ಗಳ ಬೆಲೆಯೇರಿಕೆ ಮಾಡಲಿವೆ ಎಂದು ಹೇಳಲಾಗುತ್ತಿದೆ.