ಬೆಂಗಳೂರು: ಮ್ಯೂಚುವಲ್ ಫಂಡ್ ಹೂಡಿಕೆಯು ದಿನೇದಿನೆ ಹೆಚ್ಚು ಜನಪ್ರಿಯವಾಗುತ್ತಿದೆ. ಕಡಿಮೆ ಆದಾಯ ಇರುವವರು ಕೂಡ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹಾಗಾಗಿ, ಹಲವು ಬ್ಯಾಂಕ್ ಗಳು, ಕಂಪನಿಗಳು ಹೊಸ ಹೊಸ ಮ್ಯೂಚುವಲ್ ಫಂಡ್ ಗಳನ್ನು ಪರಿಚಯಿಸುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಹೊಸ ಮ್ಯೂಚುವಲ್ ಫಂಡ್ ಆರಂಭಿಸಿದೆ. ಜುಲೈ 8ರಿಂದಲೇ ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ.
ಹೌದು, ಎಸ್ ಬಿ ಐ ಈಗ ‘ನಿಫ್ಟಿ 100 ಲೋ ವೊಲಟಿಲಿಟಿ 30 ಇಂಡೆಕ್ಸ್ ಫಂಡ್’ (Nifty100 Low Volatility 30 Index Fund) ಅನ್ನು ಪರಿಚಯಿಸಿದೆ. ಇಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಉತ್ತಮ ಲಾಭ ಒದಗಿಸುವ ಉದ್ದೇಶದಿಂದ ಕಡಿಮೆ ರಿಸ್ಕ್ ಇರುವ ಫಂಡ್ಅನ್ನು ಪರಿಚಯಿಸಿದೆ.
ಚಂಚಲತೆಯಿಂದ ಕೂಡಿರುವ ಮಾರುಕಟ್ಟೆಯಲ್ಲಿಯೂ ಹೂಡಿಕೆದಾರರು ಕಡಿಮೆ ರಿಸ್ಕ್ ಇರುವ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲಿ ಎಂದು ಎಸ್ ಬಿ ಐ ಹೊಸ ಫಂಡ್ ಅನ್ನು ನ್ಯೂ ಫಂಡ್ ಆಫರ್ ಗೆ (ಎನ್ ಪಿ ಒ) ಕಾಲಿಟ್ಟಿದೆ. ಬುಧವಾರದಿಂದಲೇ ಹೊಸ ಫಂಡ್ ನ ಚಂದಾದಾರಿಕೆ ಶುರುವಾಗಲಿದೆ.
ನಿಫ್ಟಿ 100 ಲೋ ವೊಲಟಿಲಿಟಿ 30 ಇಂಡೆಕ್ಸ್ ಫಂಡ್ ನಲ್ಲಿ ಕನಿಷ್ಠ 5 ಸಾವಿರ ರೂಪಾಯಿಂದ ಹೂಡಿಕೆ ಆರಂಭವಾಗಲಿದೆ. ಗರಿಷ್ಠ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದಾಗಿದೆ. ಹಾಗೆಯೇ, ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ ಅಥವಾ ಎಸ್ಐಪಿ ಕೂಡ ಇರಲಿದ್ದು, ಪ್ರತಿ ದಿನ, ವಾರಕ್ಕೊಮ್ಮೆ, ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಹೂಡಿಕೆ ಮಾಡುತ್ತ ಹೋಗಬಹುದಾಗಿದೆ.
ಗಮನಿಸಿ: ಮ್ಯೂಚುವಲ್ ಫಂಡ್ ಹೂಡಿಕೆಯ ಲಾಭವು ಮಾರುಕಟ್ಟೆಯ ಏರಿಳಿತಗಳನ್ನು ಆಧರಿಸಿರುತ್ತದೆ. ಇದು ಕೂಡ ರಿಸ್ಕ್ ನಿಂದ ಕೂಡಿರುತ್ತದೆ. ನಾವು ನಿಮಗೆ ಮಾಹಿತಿ ನೀಡುವ ದೃಷ್ಟಿಯಿಂದ ವರದಿಯನ್ನು ಪ್ರಕಟಿಸಿರುತ್ತೇವೆಯೇ ಹೊರತು, ಹೂಡಿಕೆಗೆ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ಪರಿಣತರ ಸಲಹೆ-ಸೂಚನೆಗಳನ್ನು ಪಡೆಯಿರಿ.