ಉಡುಪಿ: ಸಿಆರ್ ಝಡ್ ಕರಡು ಅಧಿಸೂಚನೆಯಲ್ಲಿ ಅಗತ್ಯ ತಿದ್ದುಪಡಿಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯಶ್‌ಪಾಲ್ ಸುವರ್ಣ ಭೇಟಿಯಾಗಿ ಮನವಿ ಮಾಡಿದ್ದಾರೆ.
ನಂತರ ಸಚಿವಾಲಯದ ಜಂಟಿ ಕಾರ್ಯದರ್ಶಿ ತನ್ಮಯ್ ಕುಮಾರ್ ಅವರನ್ನು ಭೇಟಿಯಾಗಿ ಕರಾವಳಿ ಜಿಲ್ಲೆಗಳಲ್ಲಿ ಸಿ.ಆರ್.ಝಡ್. ವ್ಯಾಪ್ತಿಯಲ್ಲಿ ಮರಳುಗಾರಿಕೆ ಅನುಮತಿ ಬಗ್ಗೆ ಚರ್ಚಿಸಿ ಮರಳುಗಾರಿಕೆ ಅವಕಾಶ ನೀಡಲು ವಿಶೇಷ ಕ್ರಮ ವಹಿಸುವಂತೆ ಕೋರಿದ್ದಾರೆ.
ಸಿ.ಆರ್.ಝಡ್. ಅಧಿಸೂಚನೆಯ ಪ್ರಕಾರ ಕರಾವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮರಳುಗಾರಿಕೆ ಸಂಪೂರ್ಣ ನಿಷೇಧವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಗಂಭೀರ ಸಮಸ್ಯೆ ಸೃಷ್ಟಿಯಾಗಿದೆ.
ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಿಗೆ ತೊಡಕಾಗಿರುವ ಮತ್ತು ಈಗಾಗಲೇ ಉಡಪಿ ಜಿಲ್ಲಾಡಳಿತದ ಶಿಫಾರಸಿನೊಂದಿಗೆ ಸಲ್ಲಿಸಲಾಗಿರುವ ಸಿ.ಆರ್.ಝಡ್. ಕರಡು ಅಧಿಸೂಚನೆಯಲ್ಲಿನ ಅಗತ್ಯ ತಿದ್ದುಪಡಿಯನ್ನು ಅಂಗೀಕರಿಸಿದರೆ, ಮರಳುಗಾರಿಕೆಗೆ ಅನುಮತಿ ಪಡೆಯಲು ಸಾಧ್ಯವಿದೆ ಎಂದು ಮನವಿ ಮಾಡಿದ್ದಾರೆ.