ಬೆಂಗಳೂರು: ಬಿ.ಕಾಮ್, ಬಿಬಿಎ, ಎಂಬಿಎ, ಎಂ.ಕಾಂ… ಹೀಗೆ ಯಾವುದೇ ಕಾಮರ್ಸ್ ಕೊರ್ಸ್ ಗಳನ್ನು ಮುಗಿಸಿದವರಿಗೆ, ಬ್ಯಾಂಕ್ ಉದ್ಯೋಗ ಮಾಡಬೇಕು ಎಂದು ಬಯಸುವವರಿಗೆ ಶೀಘ್ರವೇ ಗುಡ್ ನ್ಯೂಸ್ ಸಿಗಲಿದೆ. ಹೌದು, ದೇಶದ 12 ಸಾರ್ವಜನಿಕ ವಲಯದ ಬ್ಯಾಂಕ್ ಗಳು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಬರೋಬ್ಬರಿ 50 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿವೆ. ಇದರಿಂದಾಗಿ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ಸಿಗಲಿದೆ.
ಕರ್ನಾಟಕ ಸೇರಿ ದೇಶದ ಪ್ರತಿಯೊಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳು ನೇಮಕಾತಿ ಮಾಡಿಕೊಳ್ಳಲಿವೆ. ಬ್ಯಾಂಕ್ ಗಳಲ್ಲಿ ವಹಿವಾಟು ಜಾಸ್ತಿಯಾಗಿದ್ದು, ಹೆಚ್ಚಿನ ಜನ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸುವುದು, ವಿತ್ ಡ್ರಾ, ಹೂಡಿಕೆ ಮಾಡುತ್ತಿದ್ದಾರೆ. ಇದರಿಂದಾಗಿ 50 ಸಾವಿರ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ಬ್ಯಾಂಕ್ ಗಳು ಮುಂದಾಗಿವೆ ಎಂದು ತಿಳಿದುಬಂದಿದೆ.
ಒಟ್ಟು 50 ಸಾವಿರ ಹುದ್ದೆಗಳ ಪೈಕಿ ಪೈಕಿ 21 ಸಾವಿರ ಹುದ್ದೆಗಳು ಆಫೀಸರ್ ಹಂತದ ಹುದ್ದೆಗಳಾಗಿರುತ್ತವೆ. ಇನ್ನುಳಿದ ಹುದ್ದೆಗಳು, ಕ್ಲರ್ಕ್ ಸೇರಿ ಹಲವು ರೀತಿಯದ್ದಾಗಿರುತ್ತವೆ. ದೇಶದ ಬೃಹತ್ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್ ಬಿಐ ಅತಿ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿದೆ. ಎಸ್ ಬಿ ಐ ಒಟ್ಟು 20 ಸಾವಿರ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಿದೆ. ಈಗಾಗಲೇ 505 ಪ್ರೊಬೇಷನರಿ ಅಧಿಕಾರಿಗಳು ಮತ್ತು 13,455 ಕಿರಿಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡಿದೆ.
ಮತ್ತೊಂದೆಡೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ 5,500 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್ 1,02,746 ಸಿಬ್ಬಂದಿಯನ್ನು ಹೊಂದಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4 ಸಾವಿರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಬ್ಯಾಂಕಿಂಗ್ ಕ್ಷೇತ್ರವು ದಿನೇದಿನೆ ಏಳಿಗೆ ಹೊಂದುತ್ತಿರುವ ಕಾರಣ ಹೆಚ್ಚಿನ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿವೆ.