ತಿರುವನಂತಪುರಂ: ಗೂಢಚಾರಿಕೆಯ ಆರೋಪದ ಮೇಲೆ ಇತ್ತೀಚೆಗೆ ಬಂಧಿತಳಾದ ಹರ್ಯಾಣ ಮೂಲದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಕೇರಳ ಸರ್ಕಾರವೇ ತನ್ನ ಪ್ರವಾಸೋದ್ಯಮ ಪ್ರಚಾರ ಅಭಿಯಾನದ ಭಾಗವಾಗಿ ರಾಜ್ಯ ಪ್ರಾಯೋಜಿತ ಪ್ರಭಾವಿಯಾಗಿ (Influencer) ಆಹ್ವಾನಿಸಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಕೆಯಾದ ಅರ್ಜಿಯಿಂದಾಗಿ ಈ ವಿಚಾರ ಬಹಿರಂಗವಾಗಿದೆ. ಈ ಬೆಳವಣಿಗೆ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಪ್ರಚಾರ ಅಭಿಯಾನಗಳಲ್ಲಿ ಅನುಸರಿಸಲಾಗುವ ಪರಿಶೀಲನಾ ಪ್ರಕ್ರಿಯೆಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸರ್ಕಾರದ ‘ಅತಿಥಿ’ಯಾಗಿದ್ದ ‘ಶಂಕಿತ ಗೂಢಚಾರಿ’
ಜಾಗತಿಕ ಪ್ರವಾಸಿ ತಾಣವಾಗಿ ಕೇರಳದ ಬಗ್ಗೆ ಪ್ರಚಾರ ಮಾಡಿಸುವ ಉದ್ದೇಶದಿಂದ ಕೇರಳ ಸರ್ಕಾರವು ಸಂಪೂರ್ಣವಾಗಿ ಹಣ ನೀಡಿ 41 ಮಂದಿ ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ಕರೆಸಿಕೊಂಡಿತ್ತು. ಈ ಇನ್‌ಫ್ಲೂಯೆನ್ಸರ್‌ಗಳ ಪೈಕಿ ಪಾಕ್ ಪರ ಗೂಢಚರ್ಯೆ ನಡೆಸಿದ ಆರೋಪ ಹೊತ್ತಿರುವ ಜ್ಯೋತಿ ಮಲ್ಹೋತ್ರಾ ಕೂಡ ಒಬ್ಬರು ಎಂಬುದು ಆರ್‌ಟಿಐ ಅಡಿ ಪಡೆದ ಮಾಹಿತಿಯಿಂದ ಬಹಿರಂಗವಾಗಿದೆ.
ಆಕೆಯ ಪ್ರಯಾಣ, ವಸತಿ ಮತ್ತು ಆಹಾರದ ವೆಚ್ಚವನ್ನು ರಾಜ್ಯವೇ ಭರಿಸಿತ್ತು. ಅಷ್ಟೇ ಅಲ್ಲದೆ, ಅವರ ವಾಸ್ತವ್ಯದ ಸಮಯದಲ್ಲಿ ವೀಡಿಯೊ ಚಿತ್ರೀಕರಣಕ್ಕೆ ಸಹಾಯ ಮಾಡಲು ಖಾಸಗಿ ಏಜೆನ್ಸಿಯೊಂದನ್ನು ಸಹ ಕೇರಳ ಸರ್ಕಾರ ನಿಯೋಜಿಸಿತ್ತು.
ದಾಖಲೆಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ ಅವರು ಜನವರಿ 1, 2024 ಮತ್ತು ಮೇ 21, 2025ರ ನಡುವೆ ಕೇರಳ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಹಕರಿಸಿದ 41 ಸಾಮಾಜಿಕ ಮಾಧ್ಯಮ ಪ್ರಭಾವಿಗಳಲ್ಲಿ ಒಬ್ಬರಾಗಿದ್ದರು. ಈ ರಾಜ್ಯ ಪ್ರಾಯೋಜಿತ ಪ್ರಚಾರ ಅಭಿಯಾನದ ಸಮಯದಲ್ಲಿ, ಅವರು ಕಣ್ಣೂರು, ಕೋಯಿಕ್ಕೋಡ್, ಕೊಚ್ಚಿ, ಆಲಪ್ಪುಳ ಮತ್ತು ಮುನ್ನಾರ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಪ್ರಯಾಣಿಸಿದ್ದರು. ಸರ್ಕಾರವು ಅವರ ಪ್ರಯಾಣ ವೆಚ್ಚಗಳನ್ನು ಭರಿಸುವುದರ ಜೊತೆಗೆ ಈ ಕಾರ್ಯಕ್ಕಾಗಿ ಅವರಿಗೆ ಗೌರವಧನವನ್ನೂ ನೀಡಿತ್ತು. ಇದು ಪಾಕಿಸ್ತಾನಕ್ಕೆ ಮಾಹಿತಿ ರವಾನಿಸಿದ ಆರೋಪದ ಮೇಲೆ ಬಂಧಿತಳಾದ ವ್ಯಕ್ತಿಯೊಬ್ಬಳು ಸರ್ಕಾರದ ಆತಿಥ್ಯದಲ್ಲಿ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾಳೆ ಎಂಬುದನ್ನು ಸೂಚಿಸಿದ್ದು, ಆತಂಕವನ್ನು ಹುಟ್ಟುಹಾಕಿದೆ.

ಪ್ರವಾಸೋದ್ಯಮ ಸಚಿವರ ಸಮರ್ಥನೆ ಮತ್ತು ಬಿಜೆಪಿ ವಾಗ್ದಾಳಿ
ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಜ್ ಅವರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಮಲ್ಹೋತ್ರಾ ಅವರ ಗೂಢಚಾರಿಕೆ ಸಂಪರ್ಕಗಳ ಬಗ್ಗೆ ಆ ಸಮಯದಲ್ಲಿ ಸರ್ಕಾರಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ. “ಅವರನ್ನು ಆಹ್ವಾನಿಸಿದಾಗ ನಮಗೆ ಅಂತಹ ಯಾವುದೇ ಸಂಪರ್ಕಗಳ ಬಗ್ಗೆ ತಿಳಿದಿರಲಿಲ್ಲ. ಇದೆಲ್ಲವೂ ಈಗಷ್ಟೇ ಹೊರಬಂದಿದೆ,” ಎಂದು ರಿಯಾಜ್ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಈ ಬಗ್ಗೆ ತಿಳಿದಿದ್ದರೆ, ಸರ್ಕಾರ ಅಥವಾ ಇಲಾಖೆಯು ಇಂತಹ ವ್ಯಕ್ತಿಯ ಭೇಟಿಗೆ ಉದ್ದೇಶಪೂರ್ವಕವಾಗಿ ಅವಕಾಶ ನೀಡುತ್ತಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ.
“ಗೂಢಚಾರಿಕೆ ಚಟುವಟಿಕೆಗಳನ್ನು ನಡೆಸಲು ಆಕೆಗೆ ನಾವು ಅವಕಾಶ ಕಲ್ಪಿಸುತ್ತೇವೆ ಎಂದು ಯಾರಾದರೂ ಯೋಚಿಸಲು ಸಾಧ್ಯವೇ? ಇದು ಜನರಿಗೂ ಗೊತ್ತು. ಇದು ಪ್ರವಾಸೋದ್ಯಮ ಇಲಾಖೆ ಹಲವು ವರ್ಷಗಳಿಂದ ಅನುಸರಿಸುತ್ತಿರುವ ಪ್ರಮಾಣಿತ ಅಭ್ಯಾಸವಾಗಿದೆ. ಅದರಂತೆ ಆಕೆಯನ್ನು ಕರೆಸಿಕೊಳ್ಳಲಾಗಿತ್ತು. ಆಕೆ ಗೂಢಚಾರಿಣಿ ಎಂಬ ಸಣ್ಣ ಸುಳಿವೂ ನಮಗಿರಲಿಲ್ಲ” ಎಂದು ಸಚಿವರು ಹೇಳಿದ್ದಾರೆ. “ಇದು ಗಂಭೀರ ವಿಷಯ ಮತ್ತು ಪ್ರತಿಯೊಬ್ಬರೂ ಇಂತಹ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ,” ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಬಿಜೆಪಿ ಈ ವಿಚಾರದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಚಾರ ಅಭಿಯಾನಕ್ಕಾಗಿ ಆಹ್ವಾನಿಸಲಾದ ಪ್ರಭಾವಿಗಳ ಹಿನ್ನೆಲೆಯನ್ನು ಏಕೆ ಸಂಪೂರ್ಣವಾಗಿ ಪರಿಶೀಲಿಸಲಾಗಿಲ್ಲ ಎಂದು ಪ್ರಶ್ನಿಸಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ, “ಪಾಕಿಸ್ತಾನಿ ಗೂಢಚಾರಿ ಜ್ಯೋತಿ ಮಲ್ಹೋತ್ರಾ ಎಡಪಂಥೀಯ ಸರ್ಕಾರದ ಆಹ್ವಾನದ ಮೇರೆಗೆ ಕೇರಳಕ್ಕೆ ಭೇಟಿ ನೀಡಿದ್ದು, ಪ್ರವಾಸೋದ್ಯಮ ಇಲಾಖೆಯ ಸೌಜನ್ಯದಿಂದ ರಾಜ್ಯದ ಅತಿಥಿಯಾಗಿದ್ದರು ಎಂಬುದು ಬಹಿರಂಗವಾಗಿದೆ.
ಭಾರತ ಮಾತೆಯ ಚಿತ್ರಕ್ಕೆ ನಿರ್ಬಂಧ ವಿಧಿಸುವವರು, ಪಾಕ್ ಗೂಢಚಾರಿಗಳಿಗೆ ಕೆಂಪು ಹಾಸು ಹಾಸುತ್ತಾರೆ. ಪ್ರವಾಸೋದ್ಯಮ ಸಚಿವ ಮೊಹಮ್ಮದ್ ರಿಯಾಜ್ ವಿಜಯನ್ ಅವರ ಅಳಿಯ. ಅವರನ್ನು ವಜಾಗೊಳಿಸಬೇಕು ಮತ್ತು ಈ ಕುರಿತು ತನಿಖೆ ಆಗಬೇಕು” ಎಂದು ಆಗ್ರಹಿಸಿದ್ದಾರೆ.