ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗಾಗಿಯೇ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ತಂದಿದೆ. ಇದನ್ನು ಆಯ್ಕೆ ಮಾಡಿಕೊಳ್ಳಲು ನೌಕರರಿಗೆ ಸಮಯವನ್ನೂ ನೀಡಿದೆ. ಇದರ ಬೆನ್ನಲ್ಲೇ, ಈಗಾಗಲೇ ಇರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿ ಎಸ್) ಅಡಿಯಲ್ಲಿ ಸಿಗುತ್ತಿರುವ ತೆರಿಗೆ ಪ್ರಯೋಜನಗಳನ್ನು ಯುಪಿಎಸ್ ನಲ್ಲೂ ಲಭ್ಯವಾಗಿಸಿದೆ. ಇದು ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಎನಿಸಿದೆ.
ಯಾವೆಲ್ಲ ತೆರಿಗೆ ಸೌಲಭ್ಯ ಲಭ್ಯ?
- ಹಳೆಯ ತೆರಿಗೆ ಪದ್ಧತಿ ಅನ್ವಯ ನೌಕರರು ಸೆಕ್ಷನ್ 80ಸಿಸಿಡಿ ಸೌಲಭ್ಯ ಪಡೆಯುತ್ತಾರೆ. ನೌಕರರು ಸ್ವಂತ ಕೊಡುಗೆಯನ್ನು ಎನ್ ಪಿ ಎಸ್ ಗೆ ನೀಡಿದಾಗ ಈ ಪ್ರಯೋಜನ ಲಭ್ಯ. ಈ ಸೆಕ್ಷನ್ ಅಡಿಯಲ್ಲಿ ಮೂಲ ವೇತನದ ಶೇ. 10 ಅಥವಾ ₹1.5 ಲಕ್ಷ (ಯಾವುದು ಕಡಿಮೆಯೋ ಅಷ್ಟು) ಗರಿಷ್ಠ ಕಡಿತವನ್ನು ಪಡೆಯಬಹುದು.
- ಸೆಕ್ಷನ್ 80ಸಿಸಿಡಿ (1ಬಿ) ಅನ್ವಯ ಕೇಂದ್ರ ಸರ್ಕಾರಿ ನೌಕರರು ತಮ್ಮ ಎನ್ ಪಿ ಎಸ್ ಶ್ರೇಣಿ-I (ಟಯರ್-I) ಖಾತೆಯಲ್ಲಿ 50 ಸಾವಿರ ರೂ. ಠೇವಣಿ ಇಟ್ಟರೆ, ಸೆಕ್ಷನ್ 80ಸಿ ಮಿತಿಯ ಮೇಲೆ ಹೆಚ್ಚುವರಿಯಾಗಿ ಈ ಪ್ರಯೋಜನ ಸಿಗಲಿದೆ.
- ಸೆಕ್ಷನ್ 80ಸಿಸಿಡಿ (2) ಅನ್ವಯ ಉದ್ಯೋಗದಾತರು ನೌಕರರ ಎನ್ ಪಿ ಎಸ್ ಖಾತೆಗೆ ನೀಡುವ ಕೊಡುಗೆಯ ಮೇಲೆ ಈ ತೆರಿಗೆ ಪ್ರಯೋಜನ ಲಭ್ಯ. ಕೇಂದ್ರ ಸರ್ಕಾರಿ ನೌಕರರು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ (DA) ಶೇ. 14ರವರೆಗೆ ತೆರಿಗೆ ಪ್ರಯೋಜನ ಪಡೆಯಬಹುದು.
ಹೊಸ ತೆರಿಗೆ ಪದ್ಧತಿಯಲ್ಲಿ ಏನು ಲಭ್ಯ?
ಹೊಸ ತೆರಿಗೆ ರೆಜಿಮೆ ಅನ್ವಯ ಸೆಕ್ಷನ್ 80ಸಿಸಿಡಿ (2) ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಸರ್ಕಾರಿ ನೌಕರರು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 14ರಷ್ಟು ಗರಿಷ್ಠ ಕಡಿತ ಪಡೆಯಬಹುದು. ಹೊಸ ತೆರಿಗೆ ಪದ್ಧತಿಯಡಿಯಲ್ಲಿ ನೌಕರರ ಸ್ವಂತ ಕೊಡುಗೆಗೆ ಯಾವುದೇ ತೆರಿಗೆ ವಿನಾಯಿತಿ ಸಿಗೋದಿಲ್ಲ.
ಏಕೀಕೃತ ಪಿಂಚಣಿ ಯೋಜನೆ ಅನ್ವಯ ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿಗೆ ಮೊದಲಿನ 12 ತಿಂಗಳ ಸರಾಸರಿ ಮೂಲ ವೇತನದ ಶೇ. 50ರಷ್ಟು ಮೊತ್ತವು ಪಿಂಚಣಿ ಸಿಗುತ್ತದೆ. ಕನಿಷ್ಠ 25 ವರ್ಷಗಳ ಅರ್ಹತಾ ಸೇವೆಯ ನಂತರ ಪಿಂಚಣಿ ಖಚಿತವಾಗುತ್ತದೆ. ಅಲ್ಲದೆ, 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಸೇವೆ ಸಲ್ಲಿಸಿದವರಿಗೆ 10 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ.