ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಅಸಮಾಧಾನದ ಹೊಗೆ ತಾಂಡವಾಡುತ್ತಿದ್ದು, ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಹಾಗೂ ಸಚಿವರು, ಶಾಸಕರ ನಡುವೆ ಸಮನ್ವಯ ಸಾಧಿಸುವ ದೃಷ್ಟಿಯಿಂದ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತೊಂದು ಸುತ್ತಿನ ಸರಣಿ ಸಭೆಯನ್ನು ಇಂದಿನಿಂದ ಆರಂಭಿಸಲಿದ್ದಾರೆ.
ಇಂದು ಬೆಳಗ್ಗೆ 10 ರಿಂದ ಕೆಪಿಸಿಸಿ ಕಚೇರಿಯಲ್ಲಿ ಸಭೆ ಆರಂಭವಾಗಲಿದ್ದು, 24 ಕಾಂಗ್ರೆಸ್ ಶಾಸಕರಿಗೆ ಬುಲಾವ್ ನೀಡಿದ್ದಾರೆ. ಜು. 7, 8, 9ರಂದು ಬೆಳಗ್ಗೆಯಿಂದ ಸಂಜೆ 6ರ ವರೆಗೆ ಸಭೆ ನಡೆಯಲಿದೆ. ಶಾಸಕರಿಗೆ ಹಾಗೂ ಸಚವಿರಿಗೆ ಒನ್ ಟು ಒನ್ ಸಭೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ, ವಸತಿ ಸಚಿವಾಲಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ವಿಚಾರಗಳ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈಗಾಗಲೇ ಸಿದ್ಧ ಮಾದರಿ ಪ್ರಶ್ನಾವಳಿಗಳ ಮೂಲಕ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಇಂದು ಕಿತ್ತೂರು ಕರ್ನಾಟಕ ಭಾಗದ ಶಾಸಕರೊಂದಿಗೆ ಸಭೆ, ನಾಳೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರೊಂದಿಗೆ ಮತ್ತು ನಾಡಿದ್ದು ಕಾಂಗ್ರೆಸ್ ಸಂಸದರೊಂದಿಗೆ ಸುರ್ಜೇವಾಲಾ ಸಭೆ ನಡೆಸಲಿದ್ದಾರೆ. ಮೂರು ದಿನಗಳ ಸರಣಿ ಸಭೆಯ ಬಳಿಕ ಜು. 9 ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.