ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತಿ ಶೀಘ್ರದಲ್ಲಿ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬಿಜೆಪಿ ಮೈಸೂರು ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ರಾಷ್ಟ್ರಮಟ್ಟದಲ್ಲಿ ಒಬಿಸಿ ಮಂಡಳಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ ಎಂದರೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನಪಲ್ಲಟ ಆಗುವುದು ನಿಶ್ಚಿತವಾಗಿದೆ.
ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಬೆಂಗಳೂರಿಗೆ ಬಂದು ಶಾಸಕರ ಅಭಿಪ್ರಾಯ ಪಡೆದುಕೊಳ್ಳುತ್ತೇನೆ ಎಂದು ಹೇಳಿ ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯಲು ಒಂದು ಭೂಮಿಕೆಯನ್ನು ಈಗಾಗಲೇ ಸಜ್ಜು ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರನ್ನು ಅಖಿಲ ಭಾರತ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಅಂದರೆ ಸಿದ್ದರಾಮಯ್ಯ ನವರ ರಾಜೀನಾಮೆಯನ್ನು ಪಡೆದುಕೊಂಡು ದೆಹಲಿಗೆ ವರ್ಗಾವಣೆ ಮಾಡುವುದಕ್ಕೆ ಈಗಾಗಲೇ ಆದೇಶ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ನಡೆಯುತ್ತಿದೆ. ಇದರ ಪರಿಣಾಮವೇ ರಾಮನಗರದ ಶಾಸಕ ಡಿ.ಕೆ. ಶಿವಕುಮಾರ್ ಜೊತೆ 100 ಶಾಸಕರ ಬೆಂಬಲವಿದೆ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಸಿದ್ದರಾಮಯ್ಯನವರ ಮೇಲೆ ವಿಶ್ವಾಸ ಹೋಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಿ.ಆರ್. ಪಾಟೀಲ್ ಅವರು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಅವರು ಲಾಟರಿ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದಾರೆ ಎಂದರು.
ವಾಸ್ತವಿಕ ಸತ್ಯ ತೆರೆದಿಟ್ಟ ರಾಯರೆಡ್ಡಿ..
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು ರಾಜ್ಯದಲ್ಲಿನ ಹಣಕಾಸು ಪರಿಸ್ಥಿತಿ ಬಗ್ಗೆ ವಾಸ್ತವಿಕ ಸತ್ಯವನ್ನು ತೆರದಿಟ್ಟಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ರಾಯರೆಡ್ಡಿ ಅವರಿಗೆ ಹೆಚ್ಚಿನ ಮಾಹಿತಿ ಇದೆ. ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ವೇತನವನ್ನು ನೀಡಲು ಆಗುತ್ತಿಲ್ಲ. ಸಿದ್ದರಾಮಯ್ಯ ಅವರು ರಸ್ತೆಗಳು ಹಾಗೂ ಅಭಿವೃದ್ಧಿ ಕೆಲಸಗಳು ಆಗಬೇಕು ಎಂದರೆ ಗ್ಯಾರಂಟಿಗಳನ್ನು ಬಿಡಿ ಎಂದು ತಮ್ಮ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರ ಮುಖೇನ ರಾಜ್ಯದ ಜನರಿಗೆ ಹೇಳಿಸುತ್ತಾರೆ ಎಂದು ವಿಜಯೇಂದ್ರ ಅವರು ಆರೋಪಿಸಿದರು.
2 ವರ್ಷದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಂಸ್ಕøತಿಕ ನಗರ ಮೈಸೂರು ಜಿಲ್ಲೆಗೆ ಏನು ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಸರ್ಕಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗೆ ಎಷ್ಟು ಕೋಟಿ ಅನುದಾನ ನೀಡಿದ್ದಾರೆಂದು ಅವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಮೋದಿ ಜೀ ನಾಯಕತ್ವದಿಂದ ಭಾರತ ಜಗತ್ತಿನ 4ನೇ ಆರ್ಥಿಕ ಶಕ್ತಿ..
ಭಾರತವು ನರೇಂದ್ರ ಮೋದಿಯವರ ದಿಟ್ಟ ನಾಯಕತ್ವದ ಅಡಿಯಲ್ಲಿ ಎನ್‍ಡಿಎ ಸರ್ಕಾರ ತೆಗೆದುಕೊಂಡಿರುವ ನೀತಿ ನಿರ್ಧಾರಗಳ ಅನುಷ್ಠಾನದ ಪರಿಣಾಮವಾಗಿ ಜಗತ್ತಿನ 4ನೇ ಆರ್ಥಿಕ ಶಕ್ತಿಯಾಗಿ ಪರಿವರ್ತನೆಯಾಗಿದೆ. ಮೋದಿ ಜೀ ರವರು ಭಾರತವನ್ನು ಕೇವಲ 11 ವರ್ಷಗಳಲ್ಲಿ ಈ ಮಟ್ಟಕ್ಕೆ ತಂದಿದ್ದಾರೆ. ಯುಪಿಎ ಸರ್ಕಾರದಲ್ಲಿ ಭಾರತ ಜಗತ್ತಿನ 11ನೇ ಆರ್ಥಿಕ ಶಕ್ತಿಯಾಗಿತ್ತುನಎಂದು ಅವರು ತಿಳಿಸಿದರು.
ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮ ದಿನದ ಸಂಬಂಧ ಮಾತನಾಡಿದ ಅವರು, ಡಾ. ಮುಖರ್ಜಿಯವರು ಮಹಾನ್ ದೇಶಭಕ್ತ ಹಾಗೂ ಹಿರಿಯ ನಾಯಕ ದೇಶದ ಏಕತೆಗೆ ಸಮಗ್ರತೆಗೆ ಮತ್ತು ಈ ದೇಶದ ಸಾಂಸ್ಕøತಿಕ ಹಿರಿಮೆಗಾಗಿ ಕಾಶ್ಮೀರ ಈ ದೇಶದ ಅವಿಭಾಜ್ಯ ಅಂಗವೆಂದು ಸಾರಿ ಹೇಳಿದ್ದರು. ಅವರು ಈ ದೇಶಕ್ಕೋಸ್ಕರ ಬಲಿದಾನ ಮಾಡಿದವರು ಹಾಗೂ ಬಿಜೆಪಿ ಕೋಟ್ಯಾಂತರ ಕಾರ್ಯಕರ್ತರಿಗೆ ಬಹಳ ದೊಡ್ಡ ಪ್ರೇರಣಾ ಶಕ್ತಿ ಎಂದು ಸ್ಮರಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದರೆ ದೇಶದಲ್ಲಿ ರಕ್ತದೋಕುಳಿ ನಡೆಯುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಇದ್ದಾಗ ಮಾತನಾಡುತ್ತಿದ್ದರು. ನಮ್ಮ ಹಿರಿಯರಾದ ಡಾ. ಮುಖರ್ಜಿ ಅವರ ಕನಸಿನಂತೆ ಮೋದಿ ಜೀ ಅವರ ದಿಟ್ಟ ನಾಯಕತ್ವದಲ್ಲಿ ಇಂದು 370ನೇ ವಿಧಿ ರದ್ದು ಮಾಡುವ ಮುಖೇನ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಕಾರ್ಯವಾಗಿದೆ ಎಂದು ತಿಳಿಸಿದರು.
ದೇಶದ ಹೆಮ್ಮೆಯ ಪ್ರಧಾನಿ ಮಾನ್ಯ ಮೋದಿ ಜೀ ರವರು ಕೇಂದ್ರದಲ್ಲಿ ಬಿಜೆಪಿ ಎನ್‍ಡಿಎ ಸರ್ಕಾರದ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದು 11 ವರ್ಷಗಳು ಪೂರೈಸಿವೆ. ಮೋದಿ ಜೀ ರವರ ದೂರದೃಷ್ಟಿ, ಅಭಿವೃದ್ಧಿ ಪರ ಚಿಂತನೆಗಳು ಕಳೆದ 11 ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿವೆ. ಭಾರತವನ್ನು 2047ನೇ ಇಸವಿಗೆ ಒಂದು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತನೆ ಮಾಡಬೇಕೆಂಬ ಸಂಕಲ್ಪವನ್ನು ತೊಟ್ಟಿದ್ದಾರೆ. ಜಗತ್ತಿನ ಭೂಪಟದಲ್ಲಿ ಭಾರತದ ಚಿತ್ರವನ್ನು ಯಾವ ರೀತಿ ಬದಲಾವಣೆ ಮಾಡಿದ್ದಾರೆ ಎಂಬುದು ಇಂದು ದೇಶದಲ್ಲಿ ಕಾಣುತ್ತಿದೆ. ಈ ವಿಚಾರವಾಗಿ ದೇಶಾದ್ಯಂತ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ ಎಂದು ತಿಳಿಸಿದರು.
ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರದ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ಅವರ 10 ವರ್ಷಗಳ ಆಡಳಿತ ವೈಖರಿ ಯಾವ ರೀತಿ ಇತ್ತು ಎಂದರೆ ಒಂದು ಕಡೆ ದುರ್ಬಲ ಆರ್ಥಿಕ ನೀತಿಗಳು, ಮತ್ತೊಂದು ಕಡೆ ಭ್ರಷ್ಟಾಚಾರದಿಂದ ದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ನೋಡಲು ಸಾಧ್ಯವಾಗಿರಲಿಲ್ಲ. ಯುವಕರಿಗೆ ಈ ದೇಶದಲ್ಲಿ ಭವಿಷ್ಯವಿಲ್ಲ ಎಂದು ಹೇಳಿ ಪ್ರತಿಯೊಬ್ಬರು ಕೂಡ ಚರ್ಚೆ ಮಾಡುತ್ತಿದ್ದರು ಎಂದು ಅವರು ವಿವರಿಸಿದರು.
ಕೋವಿಡ್-19 ಸಂದರ್ಭದಲ್ಲಿ ಜಗತ್ತಿನ ಇತರ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವು. ಯಾವ ರೀತಿ ಕೋವಿಡ್‍ನಿಂದ ಹೊರಬರಬೇಕು ಎಂದು ಪರದಾಡುತ್ತಿದ್ದವು. 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಮೋದಿ ಜೀ ರವರು ದೇಶದಲ್ಲೇ ಕೋವಿಡ್ ಲಸಿಕೆಯನ್ನು ಆವಿಷ್ಕಾರ ಮಾಡಿ, ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಯಿತು. ಜೊತೆಗೆ ಬೇರೆ ಬೇರೆ ದೇಶಗಳಿಗೂ ಲಸಿಕೆಗಳನ್ನು ಕಳುಹಿಸಿಕೊಡುವ ಕಾರ್ಯವನ್ನು ಮೋದಿ ಜೀ ಅವರು ಮಾಡಿದ್ದಾರೆ ಎಂದು ಅವರು ನೆನಪಿಸಿದರು.
ದೇಶದಲ್ಲಿ 50 ಕೋಟಿಗಿಂತ ಹೆಚ್ಚು ಜನ್‍ಧನ್ ಖಾತೆ ತೆರೆಯಲಾಗಿದೆ, 12 ಕೋಟಿಗು ಹೆಚ್ಚು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ, 10 ಕೋಟಿ ಹೆಚ್ಚು ಕುಟುಂಬಗಳಿಗೆ ಉಚಿತ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ನೀಡಿದ್ದಾರೆ. 14 ಕೋಟಿ ಬಡವರ ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ 34 ಕೋಟಿ ಜನರಿಗೆ ಆರೋಗ್ಯ ವಿಮೆ ನೀಡಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ನೇರವಾಗಿ 11 ಕೋಟಿ ರೈತರಿಗೆ ಡಿಬಿಟಿ ಮೂಲಕ ಹಣ ತಲುಪಿಸಲಾಗುತ್ತಿದೆ. ಮೇಕ್ ಇನ್ ಇಂಡಿಯ ಯೋಜನೆಯಡಿ ಭಾರತ ಇಂದು ಹನ್ನೆರಡು ಪಟ್ಟು ಬೆಳೆದಿದೆ. ಮೋದಿ ಜೀ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಈ ರೀತಿ ದೇಶದಲ್ಲಿ ಬದಲಾವಣೆ ಆಗುತ್ತಿದೆ ಎಂದು ವಿವರಿಸಿದರು.
ಮೋದಿ ಜೀ ಸರ್ಕಾರದಿಂದ ಕರ್ನಾಟಕಕ್ಕೆ ರಸ್ತೆಗಳು, ರೈಲ್ವೆ ಮತ್ತು ನಗರಾಭಿವೃದ್ಧಿ ವಿಚಾರದಲ್ಲಿ ಸಾವಿರಾರು ಕೋಟಿ ಅನುದಾನವನ್ನು ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 1,860 ಕಿಲೋ ಮೀಟರ್‍ಗಿಂತ ಹೆಚ್ಚು ಹೆದ್ದಾರಿಗಳು ಹೊಸದಾಗಿ ನಿರ್ಮಾಣವಾಗಿದೆ. ಬೆಂಗಳೂರು – ಮೈಸೂರು ಹೆದ್ದಾರಿಗೆ ಸುಮಾರು 8,408 ಕೋಟಿ ರೂಗಳ ವೆಚ್ಚದಲ್ಲಿ ಆಗಿರುತ್ತದೆ. ನಮ್ಮ ರಾಜ್ಯದಲ್ಲಿ ಶೇ.98 ರಷ್ಟು ರೈಲ್ವೇ ವಿದ್ಯುದೀಕರಣ ಮತ್ತು ಒಂದೇ ಭಾರತ್ ಹೊಸ ರೈಲಿನ ವ್ಯವಸ್ಥೆ ಆಗಿದೆ. ಈ ರೀತಿ ವಿಕಸಿತ ಭಾರತದ ಕನಸಿನ ನಿಟ್ಟಿನಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ರಸಗೊಬ್ಬರಕ್ಕೆ ಗರಿಷ್ಠ ಸಬ್ಸಿಡಿ..
ರೈತರನ್ನು ಕೂಡ ಮೋದಿ ಜೀ ರವರು ಮರೆತಿಲ್ಲ. ರೈತರಿಗೆ ಅವಶ್ಯಕವಾಗಿರುವ 50ಕೆಜಿ ಚೀಲ ಯೂರಿಯಾ ರಸಗೊಬ್ಬರದ ಅಂತರಾಷ್ಟ್ರೀಯ ಮಾರುಕಟ್ಟೆ ಬೆಲೆ 2,450 ರೂ. ಗಳಾಗಿದೆ. ಆದರೆ ರೈತರಿಗೆ ಯುರಿಯಾ ರಸಗೊಬ್ಬರವು 275 ರೂ. ಗೆ ಸಿಗುತ್ತಿದೆ. ಅಂದರೆ ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಸಬ್ಸಿಡಿ ಎಷ್ಟು ಎಂದರೆ ಸುಮಾರು 2200 ರೂ. ಆಗಿದೆ. ಅದೇ ರೀತಿ ಡಿಎಪಿ ಗೊಬ್ಬರ ಮಾರುಕಟ್ಟೆ ಬೆಲೆ 4073 ರೂ. ಕೇಂದ್ರ ಸರ್ಕಾರ ರೈತರಿಗೆ ಸಬ್ಸಿಡಿ 2501 ರೂ. ನೀಡುತ್ತಿದೆ ಎಂದು ಅವರು ವಿವರಿಸಿದರು.
ಸಿದ್ದಾರಮಯ್ಯ ನವರ ನೇತೃತ್ವದಲ್ಲಿ ಗ್ಯಾರಂಟಿಗಳನ್ನು ಜಪ ಮಾಡಿಕೊಂಡು ಮತ್ತು ಬಿಜೆಪಿ ಸರ್ಕಾರದ ಮೇಲೆ ಅಪಪ್ರಚಾರಗಳನ್ನು ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದು ರೀತಿ ರಾಜ್ಯದಲ್ಲಿರುವಂತ ರೈತರು, ಬಡವರು ಮತ್ತು ಜನ ಸಾಮಾನ್ಯರ ಜೇಬಿಗೆ ಕತ್ತರಿಯನ್ನು ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರ ಬಂದ ದಿನದಿಂದ ಜನಬಳಕೆ ವಸ್ತುಗಳ ಬೆಲೆ ದುಬಾರಿಯಾಗಿದೆ, ಪೆಟ್ರೋಲ್ ಮತ್ತು ಡೀಸೆÀಲಿನ ರಾಜ್ಯ ಸರ್ಕಾರ ತೆರಿಗೆಯನ್ನು ಜಾಸ್ತಿ ಮಾಡಿದೆ, ಹಾಲಿನ ದರವನ್ನು ಜಾಸ್ತಿ ಮಾಡಿದೆ, ರೈತರು ತಮ್ಮ ಹೊಲಕ್ಕೆ ಹಾಕಿಸುವ ಟ್ರಾನ್ಸ್‍ಫಾರ್ಮರ್ ಬೆಲೆ ಹೆಚ್ಚಾಗಿದೆ, ಬಡವರು ಇ-ಖಾತೆಯನ್ನು ಪಡೆದುಕೊಳ್ಳಬೇಕಾದರೆ ತಿಂಗಳುಗಳ ಕಾಲ ಕಾಯುವ ಪರಿಸ್ಥಿತಿ ಬಂದಿದೆ, ನಗರ ಪ್ರದೇಶದ ಆಸ್ತಿಯ ಮೇಲೆ ತೆರಿಗೆ ಹೆಚ್ಚು ಮಾಡಿರುವುದು ಒಂದು ಕಡೆಯಾದರೆ ಗ್ರಾಮೀಣ ಭಾಗದಲ್ಲೂ ಸಹ ಎರಡುಪಟ್ಟು ಹೆಚ್ಚು ತೆರಿಗೆ ಜಾಸ್ತಿ ಮಾಡುತ್ತೇವೆ ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಆರೋಪಿಸಿದರು.
ಬಡವರಿಗೆ ಬರೆ ಎಳೆಯುವ ಕೆಲಸ ಈ ರಾಜ್ಯ ಸರ್ಕಾರ ಮಾಡುತ್ತಿದೆ ವಿನಹಃ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದೆ ಮತ್ತು ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿಹೋಗಿದೆ ಎಂದು ತಿಳಿಸಿದರು.
ಕಾಂತರಾಜು ವರದಿ ರಾಜಕೀಯ ಅಸ್ತ್ರವಾಗಿ ದುರುಪಯೋಗ..
ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಕಾಂತರಾಜು ವರದಿಯನ್ನು ರಾಜಕೀಯ ಅಸ್ತ್ರವಾಗಿ ದುರುಪಯೋಗ ಮಾಡಿಕೊಂಡು ಜಾತಿ ಜಾತಿಗಳಿಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆಯೇ ಹೊರತು ವರದಿಯನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದು ಆರೋಪಿಸಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆದೇಶ ಬಂದಿದೆ ಎಂದು ಹೇಳಿ 165 ಕೋಟಿ ವೆಚ್ಚದಿಂದ ತಯಾರು ಮಾಡಿದ್ದ ಕಾಂತರಾಜು ವರದಿಯನ್ನು ಕಸದಬುಟ್ಟಿಗೆ ಹಾಕಿದ್ದಾರೆ. ಆದರೆ ಪ್ರಸ್ತುತ ಹೊಸದಾಗಿ ಜಾತಿಗಣತಿ ಮಾಡುತ್ತೇವೆ ಎಂದು ಸ್ಟಿಕರ್‍ಗಳನ್ನು ಅಂಟಿಸಿಕೊಂಡು ಬರುತ್ತಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.
ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಶಾಸಕ ಟಿ.ಎಸ್.ಶ್ರೀವತ್ಸ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೆರೆ, ಮೈಸೂರು ನಗರ ಜಿಲ್ಲಾಧ್ಯಕ್ಷ ಎಲ್.ನಾಗೇಂದ್ರ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ಎನ್. ಸುಬ್ಬಣ್ಣ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಹರ್ಷವರ್ಧನ ಅವರು ಉಪಸ್ಥಿತರಿದ್ದರು.