ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರ ಜೊತೆ ಜೊತೆಯಲ್ಲಿ ಕೆಲಸ ಮಾಡಿದವರು. ಕಾಂಗ್ರೆಸ್ಸೇತರ ಮುಖಂಡರು ಎಂದರೆ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಡಾ. ಅಂಬೇಡ್ಕರ್. ಅವರು ಮೊದಲ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಂವಿಧಾನ ಬರೆದ ಸಂದರ್ಭದಲ್ಲಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಅಳವಡಿಸಲಿಲ್ಲ. ಬಾಬಾ ಸಾಹೇಬರನ್ನು ದೂರ ಇಟ್ಟು ನೆಹರು ಅವರು ತಮ್ಮ ಅವಶ್ಯಕತೆ ಮತ್ತು ಓಲೈಕೆಗಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಿದರು ಎಂದು ಆರೋಪಿಸಿದರು.
370ನೇ ವಿಧಿ ಸೇರಿಸಿದ ದಿನದಿಂದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು ಅದರ ವಿರುದ್ಧ ಹೋರಾಟ ಪ್ರಾರಂಭಿಸಿದ್ದರು. ಈ ದೇಶಕ್ಕಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಸಮರ್ಪಿಸಿದ ಒಬ್ಬ ಮಹಾನ್ ವ್ಯಕ್ತಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಎಂದು ಹೇಳಿದರು.
ಡಾ. ಮುಖರ್ಜಿ ಅವರು ಸ್ವಾತಂತ್ರ್ಯಾನಂತರ ಪ್ರಥಮ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ಆ ಕಾಲಘಟ್ಟದಲ್ಲಿ ಬಹುಮುಖ ಪ್ರತಿಭೆಯಾಗಿದ್ದವರು. ಇವರು ಒಬ್ಬ ರಾಜಕೀಯ ನಾಯಕರು, ಶಿಕ್ಷಣ ತಜ್ಞರು, ಹೋರಾಟಗಾರರು, ಸಮಾಜ ಸೇವಕರು. ಹೀಗೆ ಅನೇಕ ರೀತಿಯಲ್ಲಿ ಈ ದೇಶಕ್ಕೆ ಕೊಡುಗೆಯನ್ನು ಕೊಟ್ಟವರು ಎಂದು ಹೇಳಿದ್ದಾರೆ.
ಇವರ ಹೆಸರು ಬಹಳವಾಗಿ ಕೇಳಲ್ಪಟ್ಟಿದ್ದು ಬ್ರಿಟಿಷರ ವಿರುದ್ಧವಾಗಿ ಕ್ವಿಟ್ ಇಂಡಿಯ ಚಳವಳಿಯ ರುವಾರಿಯಾಗಿ ಬಹು ದೊಡ್ಡ ಹೋರಾಟವನ್ನು ಅವರು ರೂಪಿಸಿದ್ದರು ಎಂದು ನೆನಪಿಸಿದರು.
ಕಾಂಗ್ರೆಸ್ಸಿನವರು, ಆರೆಸ್ಸೆಸ್ ಮತ್ತು ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿಲ್ಲ ಹಾಗೂ ಸತ್ತಿಲ್ಲ ಎಂದು ಹೇಳುತ್ತಾರೆ. ಈ ರೀತಿ ಕಾಂಗ್ರೆಸ್ಸಿಗರು ಹೇಳಲೇಬೇಕು ಯಾಕೆಂದರೆ ಸ್ವಾತಂತ್ರ್ಯ ಅನ್ನುವುದು ತಮ್ಮಿಂದ ಮಾತ್ರ ಬಂದಿದೆ ಎಂಬುದು ಕಾಂಗ್ರೆಸ್ಸಿನವರಿಗೆ ಬೇಕಾಗಿದೆ ಎಂದು ಅವರು ಟೀಕಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಸಹಕಾರ್ಯದರ್ಶಿ ವಿಶ್ವನಾಥ ಅಣಜಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.