ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಅಧಿಕೃತ ಮುಖ್ಯ ನ್ಯಾಯಮೂರ್ತಿಗಳ ನಿವಾಸದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಉಳಿದುಕೊಂಡಿದ್ದು, ಇನ್ನೂ ಮನೆ ತೆರವುಗೊಳಿಸಿಲ್ಲ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್ ಆಡಳಿತವು ಕೇಂದ್ರ ಸರ್ಕಾರಕ್ಕೆ ಔಪಚಾರಿಕವಾಗಿ ಪತ್ರ ಬರೆದಿದೆ. ಆ ಬಂಗಲೆಯನ್ನು ತಕ್ಷಣವೇ ಖಾಲಿ ಮಾಡಿ, ಅದನ್ನು ನ್ಯಾಯಾಲಯದ ವಸತಿ ವ್ಯವಸ್ಥೆಗೆ ಹಿಂದಿರುಗಿಸುವಂತೆ ಸುಪ್ರೀಂ ಕೋರ್ಟ್ ಆಡಳಿತವು ಕೋರಿದೆ.
ಲುಟೆನ್ಸ್ ದೆಹಲಿಯ ಕೃಷ್ಣ ಮೆನನ್ ಮಾರ್ಗ್‌ನಲ್ಲಿರುವ ಬಂಗಲೆ ಸಂಖ್ಯೆ 5, ಹಾಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಮೀಸಲಾದ ಅಧಿಕೃತ ನಿವಾಸವಾಗಿದೆ. ಇದನ್ನು ತಕ್ಷಣವೇ ತೆರವುಗೊಳಿಸುವಂತೆ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವರದಿಗಳು ಹೇಳಿವೆ.
ನವೆಂಬರ್ 2022ರಿಂದ ನವೆಂಬರ್ 2024ರವರೆಗೆ ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನಿವೃತ್ತಿಯಾದ ಎಂಟು ತಿಂಗಳ ನಂತರವೂ ಟೈಪ್ VIII ಬಂಗಲೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರ ಉತ್ತರಾಧಿಕಾರಿಗಳಾದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಹಾಲಿ ಸಿಜೆಐ ಭೂಷಣ್ ಆರ್. ಗವಾಯಿ ಇಬ್ಬರೂ ಅಧಿಕೃತ ನಿವಾಸಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದು, ತಮಗೆ ಹಿಂದೆ ಹಂಚಿಕೆ ಮಾಡಲಾಗಿದ್ದ ವಸತಿಗಳಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರು, ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಏಪ್ರಿಲ್ 2025 ರವರೆಗೆ ವಿಸ್ತರಣೆಗೆ ಅನುಮತಿ ನೀಡಿದ್ದರು ಮತ್ತು ಏಪ್ರಿಲ್ ಅಂತ್ಯದಲ್ಲಿ, ಜೂನ್ 2025ರವರೆಗೆ ಮತ್ತಷ್ಟು ವಿಸ್ತರಣೆ ಕೋರಿ ನ್ಯಾಯಮೂರ್ತಿ ಖನ್ನಾಗೆ ಪತ್ರ ಬರೆದಿದ್ದೆ ಎಂದು ತಿಳಿಸಿದ್ದಾರೆ.
“ನಮ್ಮ ಹೆಣ್ಣುಮಕ್ಕಳಿಗೆ ವಿಶೇಷ ಅಗತ್ಯತೆ(ದಿವ್ಯಾಂಗರು)ಗಳಿರುವುದರಿಂದ ನಾವು ಒಂದು ನಿರ್ದಿಷ್ಟ ಮನೆಯನ್ನು ಹುಡುಕುತ್ತಿದ್ದೇವೆ. ನಮ್ಮ ಹಿರಿಯ ಮಗಳಿಗಾಗಿ ಐಸಿಯು ತರಹದ ವ್ಯವಸ್ಥೆಯನ್ನು ನಾವು ಸಿದ್ಧಪಡಿಸಿದ್ದೇವೆ, ಆದ್ದರಿಂದ ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಮುಕ್ತ ಮಾರುಕಟ್ಟೆಯಲ್ಲಿ ಮನೆ ಹುಡುಕುವುದು ಕಷ್ಟ. ಹಾಗಾಗಿ, ಬಾಡಿಗೆಗೆ ತಾತ್ಕಾಲಿಕ ವಸತಿ ನೀಡುವಂತೆ ಸರ್ಕಾರಕ್ಕೆ ವಿನಂತಿಸಿದ್ದೆ” ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಅವರಿಗೆ ಹಂಚಿಕೆ ಮಾಡಲಾದ ಸರ್ಕಾರಿ ಮನೆಗೆ ಗಣನೀಯ ದುರಸ್ತಿ ಕಾರ್ಯಗಳು ಬೇಕಾಗಿದ್ದು, ಕೆಲಸ ಪೂರ್ಣಗೊಳ್ಳಲು ಕಾಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಕೆಲಸ ಮುಗಿದ ನಂತರ, ಸ್ಥಳಾಂತರ ಪ್ರಕ್ರಿಯೆ ಆರಂಭವಾಗಲಿದೆ ಎಂದಿದ್ದಾರೆ.
ನಿಗದಿತ ಅವಧಿ ಮುಕ್ತಾಯ:
ವರದಿಯ ಪ್ರಕಾರ, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನಿವೃತ್ತಿಯಾದ ಒಂದು ತಿಂಗಳ ನಂತರ, ಡಿಸೆಂಬರ್ 18, 2024ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದು, 5 ಕೃಷ್ಣ ಮೆನನ್ ಮಾರ್ಗ್‌ನಲ್ಲಿ ಏಪ್ರಿಲ್ 30, 2025ರವರೆಗೆ ಉಳಿದುಕೊಳ್ಳಲು ಅನುಮತಿ ಕೋರಿದ್ದರು.
ಪತ್ರದಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ತಿದ್ದುಪಡಿ) ನಿಯಮಗಳು, 2022 ರ ನಿಯಮ 3ಬಿ ಅಡಿಯಲ್ಲಿ ತುಘಲಕ್ ರಸ್ತೆಯಲ್ಲಿರುವ ಬಂಗಲೆ ಸಂಖ್ಯೆ 14 ಅನ್ನು ಹಂಚಿಕೆ ಮಾಡಲಾಗಿದ್ದರೂ, GRAP-IV ಅಡಿಯಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲಿನ ನಿರ್ಬಂಧಗಳಿಂದಾಗಿ ಹೊಸ ನಿವಾಸದಲ್ಲಿ ನವೀಕರಣ ಕಾರ್ಯ ವಿಳಂಬವಾಗಿದೆ ಎಂದು ವಿವರಿಸಿದ್ದರು. “ಏಪ್ರಿಲ್ 30, 2025 ರವರೆಗೆ 5 ಕೃಷ್ಣ ಮೆನನ್ ಮಾರ್ಗ್‌ನಲ್ಲಿರುವ ಈಗಿನ ಮನೆಯಲ್ಲೇ ಉಳಿಸಿಕೊಳ್ಳಲು ನನಗೆ ಅನುಮತಿ ನೀಡಿದರೆ ಹೆಚ್ಚು ಅನುಕೂಲಕರವಾಗಿರುತ್ತದೆ” ಎಂದು ಅವರು ಬರೆದಿದ್ದರು. ತುಘಲಕ್ ರಸ್ತೆಯ ಬಂಗಲೆಯನ್ನು ಮತ್ತೊಬ್ಬ ನ್ಯಾಯಮೂರ್ತಿಗೆ ಹಂಚಿಕೆ ಮಾಡಲು ಅನುವಾಗುವಂತೆ ಅದನ್ನು ಒಪ್ಪಿಸಲು ಅವರು ಪ್ರಸ್ತಾಪಿಸಿದ್ದರು.
2022ರ ನಿಯಮ 3B ಪ್ರಕಾರ, ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರು ಅಧಿಕಾರದಿಂದ ಕೆಳಗಿಳಿದ ಆರು ತಿಂಗಳವರೆಗೆ ಟೈಪ್ VII ವಸತಿ (ಕೃಷ್ಣ ಮೆನನ್ ಮಾರ್ಗ್‌ನಲ್ಲಿರುವ ಟೈಪ್ VIII ನಿವಾಸಕ್ಕಿಂತ ಒಂದು ವರ್ಗ ಕಡಿಮೆ) ಯನ್ನು ಉಳಿಸಿಕೊಳ್ಳಲು ಅನುಮತಿಸುತ್ತದೆ.
ಅಂದಿನ ಸಿಜೆಐ ಅನುಮೋದನೆಯ ನಂತರ, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಡಿಸೆಂಬರ್ 11, 2024 ರಿಂದ ಏಪ್ರಿಲ್ 30, 2025 ರವರೆಗೆ ಟೈಪ್ VIII ಬಂಗಲೆಯಲ್ಲಿ ಉಳಿದುಕೊಳ್ಳಲು ಅನುಮತಿ ನೀಡಿತ್ತು. ಈ ಕುರಿತು ಫೆಬ್ರವರಿ 13, 2025 ರಂದು ಸುಪ್ರೀಂ ಕೋರ್ಟ್‌ಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿತ್ತು.