ರಿಯೊ ಡಿ ಜನೈರೊ: ಅರ್ಜೆಂಟೀನಾ ಪ್ರವಾಸ ಮುಗಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬ್ರೆಜಿಲ್‌ಗೆ ಆಗಮಿಸಿದ್ದಾರೆ. ಭಾರತದ ಉಗ್ರ ನಿಗ್ರಹ ಕಾರ್ಯಾಚರಣೆಯಾದ ‘ಆಪರೇಷನ್ ಸಿಂದೂರ’ಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಬ್ರೆಜಿಲ್ ನಲ್ಲಿರುವ ಭಾರತೀಯ ಸಮುದಾಯವು ಮೋದಿಯವರಿಗೆ ಅಚ್ಚರಿಯ ಹಾಗೂ ಅದ್ಧೂರಿ ಸ್ವಾಗತ ನೀಡಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಈ ಧೈರ್ಯಶಾಲಿ ಕಾರ್ಯಾಚರಣೆಯನ್ನು ಚಿತ್ರಿಸಿದ ಈ ಪ್ರದರ್ಶನವು ಪ್ರಧಾನಿಗೆ ವರ್ಣರಂಜಿತ ಸ್ವಾಗತವನ್ನು ನೀಡಿದ್ದು, ಇದು ನನ್ನನ್ನು ಅತೀವವಾಗಿ ಸ್ಪರ್ಶಿಸಿದೆ, ಇದೊಂದು ಹೃದಯಸ್ಪರ್ಶಿ ಸ್ವಾಗತ ಎಂದು ಪ್ರಧಾನಿ ಮೋದಿ ವರ್ಣಿಸಿದ್ದಾರೆ.
ಬ್ರೆಜಿಲ್‌ನಲ್ಲಿರುವ ಭಾರತೀಯ ಸಮುದಾಯದ ಕಲಾವಿದರು ಪ್ರದರ್ಶಿಸಿದ ಈ ಕಾರ್ಯಕ್ರಮದಲ್ಲಿ ಭಾರತೀಯ ಭದ್ರತಾ ಪಡೆಗಳು ಭಯೋತ್ಪಾದಕ ಬೆದರಿಕೆಗಳನ್ನು ಎದುರಿಸುವ ದೃಶ್ಯಗಳು ಸೇರಿದ್ದವು. ನಂತರ ದೇಶಭಕ್ತಿಯ ಸಂಗೀತದ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ಇದನ್ನು ವೀಕ್ಷಿಸಿದ ಪ್ರಧಾನಿ ಮೋದಿ, ಭಾರತೀಯ ಸಮುದಾಯದ ಸೃಜನಶೀಲತೆ ಮತ್ತು ಉತ್ಸಾಹವನ್ನು ಶ್ಲಾಘಿಸಿದರು.
ಐದು ರಾಷ್ಟ್ರಗಳ ಪ್ರವಾಸದ ನಾಲ್ಕನೇ ಹಂತದಲ್ಲಿರುವ ಪ್ರಧಾನಿ ಮೋದಿ, ಭಾನುವಾರ ಮುಂಜಾನೆ ಗಲೇಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಾಂಪ್ರದಾಯಿಕ ಸ್ವಾಗತವನ್ನು ಸ್ವೀಕರಿಸಿದರು. ಪ್ರಧಾನಿ ಮೋದಿ ಅವರು 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಿಯೊ ಡಿ ಜನೈರೊದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಅವರು ಹೋಟೆಲ್‌ಗೆ ಆಗಮಿಸುತ್ತಿದ್ದಂತೆ, ಭಾರತೀಯ ಸಮುದಾಯದ ನೂರಾರು ಸದಸ್ಯರು ಅವರನ್ನು ಸ್ವಾಗತಿಸಲು ಜಮಾಯಿಸಿದ್ದರು. ಈ ವೇಳೆ ತ್ರಿವರ್ಣ ಧ್ವಜಗಳನ್ನು ಹಾರಿಸುತ್ತಾ, “ಭಾರತ್ ಮಾತಾ ಕಿ ಜೈ” ಎಂದು ಘೋಷಣೆಗಳನ್ನು ಕೂಗಿದ್ದು ಕಂಡುಬಂತು.
ಬ್ರೆಜಿಲ್‌ನಲ್ಲಿ ತಮ್ಮ ನಾಲ್ಕು ದಿನಗಳ ವಾಸ್ತವ್ಯದ ಅವಧಿಯಲ್ಲಿ, ಪ್ರಧಾನಿ ಮೋದಿ ಜುಲೈ 6-7 ರಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಬ್ರೆಸಿಲಿಯಾಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಸುಮಾರು ಆರು ದಶಕಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಬ್ರೆಸಿಲಿಯಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಬ್ರಿಕ್ಸ್ ಗುಂಪು ಇತ್ತೀಚೆಗೆ ಐದು ಹೊಸ ಸದಸ್ಯರನ್ನು (ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ) ಸೇರಿಸಿಕೊಂಡಿದೆ. ಪ್ರಧಾನಿ ಮೋದಿ ಅವರು ಬ್ರೆಜಿಲ್‌ಗೆ ಆಗಮಿಸಿರುವ ಸಂದರ್ಭದಲ್ಲಿ ಈ ವಿಸ್ತರಣೆಯು ಮಹತ್ವ ಪಡೆದಿದೆ.
ಮೋದಿಯವರು ಬ್ರಿಕ್ಸ್ ನಾಯಕರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದಾರೆ. ಬ್ರೆಜಿಲ್ ಭೇಟಿಗೆ ಮೊದಲು ಮೋದಿ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ ಹಾಗೂ ಅರ್ಜೆಂಟೀನಾ ದೇಶಗಳಿಗೆ ಭೇಟಿ ನೀಡಿದ್ದರು. ಅವರ ರಾಜತಾಂತ್ರಿಕ ಪ್ರವಾಸದ ಅಂತಿಮ ನಿಲುಗಡೆ ನಮೀಬಿಯಾ ಆಗಲಿದೆ.