ಬೆಂಗಳೂರು: ನಗರದಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಟೆಂಪೊ ಎರಡು ಪೀಸ್ ಆಗಿರುವ ಘಟನೆ ನಡೆದಿದೆ.
ಇಲ್ಲಿನ ಜ್ಞಾನಭಾರತಿ ರಿಂಗ್ ರಸ್ತೆಯ ರಾಮಸಂದ್ರ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಬ್ರಿಡ್ಜ್ ಗೆ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಎರಡು ತುಂಡಾಗಿ ಬಿದ್ದಿದೆ. ಒಂದು ತುಂಡು ಬ್ರಿಡ್ಜ್ ನಿಂದ ಕೆಳಗೆ ಬಿದ್ದಿದೆ. ಈ ಘಟನೆ ಜುಲೈ 5ರಂದು ನಡೆದಿದೆ. ಟೆಂಪೊ ಬ್ಯಾಡರಹಳ್ಳಿ ಕಡೆಯಿಂದ ಕೆಂಗೇರಿ ಮಾರ್ಗವಾಗಿ ತೆರಳುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಟೆಂಪೊನಲ್ಲಿ ಬೆಡ್ ಶೀಟ್ ಹಾಗೂ ಬಟ್ಟೆಗಳನ್ನು ತುಂಬಿಕೊಂಡು ಮೂವರು ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ಟೆಂಪೋ ಬಲಭಾಗದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿವೈಡರ್ ಹಾರಿ ಬಂದ ಟೆಂಪೊ ಎರಡು ಪೀಸ್ ಆಗಿದೆ. ಡ್ರೈವರ್ ಸೀಟ್ ನಿಂದ ನೇತಾಡಿ ಚಾಲಕ ಕ್ಯಾಬಿನ್ ಸಮೇತ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ 35 ವರ್ಷದ ಚಾಲಕ ರಾಘವೇಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಟೆಂಪೊದಲ್ಲಿದ್ದ ಸಲೀಂ ಮತ್ತು ಫಜಾಯ್ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















