ಬೆಂಗಳೂರು: ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದೇ ಕೆಲವೊಮ್ಮೆ ಕಷ್ಟವಾಗುತ್ತದೆ. ಅದರಲ್ಲೂ, ಪ್ರತಿ ತಿಂಗಳು ಮಿನಿಮಮ್ ಬ್ಯಾಲೆನ್ಸ್ ಅಥವಾ ಕನಿಷ್ಠ ಠೇವಣಿ ಮೊತ್ತವನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಉಳಿತಾಯ ಖಾತೆಯಲ್ಲಿರುವ ಎಲ್ಲ ಹಣವನ್ನು ವಿತ್ ಡ್ರಾ ಮಾಡುತ್ತೇವೆ. ಇದರಿಂದಾಗಿ ಬ್ಯಾಂಕ್ ಗಳು ಗ್ರಾಹಕರಿಗೆ ಶುಲ್ಕ ಅಥವಾ ದಂಡ ವಿಧಿಸುತ್ತವೆ. ಆದರೆ, ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡುವ ತಲೆನೋವನ್ನು ಇಂಡಿಯನ್ ಬ್ಯಾಂಕ್ ಕೊನೆಗಾಣಿಸಿದೆ.
ಹೌದು, ಇಂಡಿಯನ್ ಬ್ಯಾಂಕ್ ತನ್ನ ಉಳಿತಾಯ ಖಾತೆಗಳ ಮೇಲಿನ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣಾ ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ಘೋಷಣೆ ಮಾಡಿದೆ. ಉಳಿತಾಯ ಖಾತೆಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಅದು ಹೇಳಿದೆ. ಇಂಡಿಯನ್ ಬ್ಯಾಂಕ್ ತೆಗೆದುಕೊಂಡಿರುವ ಹೊಸ ನಿರ್ಧಾರವು 2025ರ ಜುಲೈ 7ರಿಂದಲೇ ಜಾರಿಗೆ ಬರಲಿದೆ.
ಸೇವಿಂಗ್ಸ್ ಖಾತೆಗಳ ಕನಿಷ್ಠ ಬ್ಯಾಲೆನ್ಸ್ ಶುಲ್ಕವನ್ನು (ಜೀರೋ ಬ್ಯಾಲೆನ್ಸ್ ಅಕೌಂಟ್) ರದ್ದುಪಡಿಸುವ ಮೂಲಕ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಮೀಣ ಪ್ರದೇಶದ ಖಾತೆದಾರರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಬ್ಯಾಂಕ್ ತಿಳಿಸಿದೆ. ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವ ಅಗತ್ಯವಿಲ್ಲದ ಕಾರಣ ಅವರಿಗೆ ಆರ್ಥಿಕವಾಗಿ ಬೆಂಬಲ ದೊರೆಯುತ್ತದೆ ಎಂದು ಹೇಳಿದೆ. ಇದು ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ ಎಂದು ಮಾಹಿತಿ ನೀಡಿದೆ.
ಈಗಾಗಲೇ 3 ಬ್ಯಾಂಕ್ ಗಳಿಂದ ಘೋಷಣೆ
ಕನಿಷ್ಠ ನಿರ್ವಹಣಾ ಶುಲ್ಕವನ್ನು ಈಗಾಗಲೇ ದೇಶದ ಮೂರು ಬ್ಯಾಂಕುಗಳು ರದ್ದುಗೊಳಿಸಿವೆ. ಕೆಲ ವರ್ಷಗಳ ಹಿಂದೆಯೇ ಎಸ್ ಬಿ ಐ ಶುಲ್ಕವನ್ನು ರದ್ದುಗೊಳಿಸಿದೆ. ದೇಶದ ಎರಡನೇ ದೊಡ್ಡ ಬ್ಯಾಂಕ್ ಎನಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಕೂಡ ಶುಲ್ಕವನ್ನು ಮನ್ನಾ ಮಾಡಿವೆ. ಈಗ ಇಂಡಿಯನ್ ಬ್ಯಾಂಕ್ ಕೂಡ ಶುಲ್ಕವನ್ನು ರದ್ದುಗೊಳಿಸಿದೆ. ಇದರಿಂದ ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗಲಿದೆ.