ಬೆಂಗಳೂರು: ದಾಸರಹಳ್ಳಿ ವಲಯದ ಕೆಐಎಡಿಬಿ ರಸ್ತೆಯಲ್ಲಿ ಪಾದಾಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ದಾಸರಹಳ್ಳಿ ವಲಯದ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಹೇಳಿದರು.
ಅನಧಿಕೃತ ಒ.ಎಫ್.ಸಿ ತೆರವು:
ದಾಸರಹಳ್ಳಿ ವಲಯದ ಕೆಐಎಡಿಬಿ ರಸ್ತೆಯಲ್ಲಿ ಎನ್‌ಟಿಟಿಎಫ್ ವೃತ್ತದಿಂದ 14ನೇ ಕ್ರಾಸ್ ಜಂಕ್ಷನ್ ವರೆಗಿನ ಅನಧಿಕೃತ ಒ.ಎಫ್.ಸಿ ಸೇರಿದಂತೆ ಬಿದ್ದ ರೆಂಬೆ ಕೊಂಬೆ, ಪಾದಾಚಾರಿಗಳ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ಸೈಜ್ ಕಲ್ಲುಗಳನ್ನು ತೆರವುಗೊಳಿಸಿ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.
ಪಾದಾಚಾರಿ ಒತ್ತುವರಿ ಮಾಡಿರುವವರಿಗೆ ದಂಡ:
ತೆರವು ಕಾರ್ಯಾಚರಣೆ ವೇಳೆ ಪಾದಾಚಾರಿ ಮಾರ್ಗದಲ್ಲಿನ 4 ತಳ್ಳುಗಾಡಿಗಳನ್ನು ತೆರವುಗೊಳಿಸಲಾಯಿತು. ಅಲ್ಲದೇ, ನಾಲ್ಕು ಸ್ಥಳಗಳಲ್ಲಿ ಪಾದಾಚಾರಿ ಮಾರ್ಗವನ್ನು ಒತ್ತುವರಿ ಮಾಡಿರುವವರಿಗೆ 4000 ರೂ. ದಂಡ ವಿಧಿಸಲಾಯಿತು.
ಬೊಮ್ಮನಹಳ್ಳಿ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು:
ಬೊಮ್ಮನಹಳ್ಳಿ ವಲಯದ ಅಂಜನಾಪುರ ಉಪವಿಭಾಗ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿನ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.
ಅದಲ್ಲದೆ ಹೆಚ್.ಎಸ್.ಆರ್ ಲೇಔಟ್ ನಲ್ಲಿ ಪಾದಚಾರಿ ಮಾರ್ಗದಲ್ಲಿ ಇರಿಸಿದ್ದ ಶಾಶ್ವತ ಮಳಿಗೆಗಳನ್ನು ತೆರವುಗೊಳಿಸಲಾಯಿತು. ಈ ವೇಳೆ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.