ಚಿತ್ರದುರ್ಗ: ಬೈಕ್ ಮತ್ತು ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಖಾಸಗಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಚಿತ್ರದುರ್ಗದ ಮದಕರಿಪುರ ಬ್ರಿಡ್ಜ್ ಬಳಿ ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಬಚ್ಚಬೋರನಹಟ್ಟಿ ನಿವಾಸಿ ರಮೇಶ್ (32) ಸಾವನ್ನಪ್ಪಿರುವ ಬೈಕ್ ಸವಾರ ಎನ್ನಲಾಗಿದೆ. ಬೈಕ್ ಅಪಘಾತದ ಬಳಿಕ ಬಸ್ ನ ಅಡಿಯಲ್ಲಿ ಬೈಕ್ ಸಿಲುಕಿದೆ. ಬಸ್ಸಿನ ಕೆಳಗೆ ಸಿಲುಕಿ ಬೈಕ್ ಸ್ಪಾರ್ಕ್ ಆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಪರಿಣಾಮ ಗಣೇಶ ಟ್ರಾವೆಲ್ಸ್ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



















