ಕರಾವಳಿಯುದ್ದಕ್ಕೂ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇವಾಲಯಗಳು ನಮಗೆ ಕಾಣಸಿಗುತ್ತವೆ. ಈ ಪೈಕಿ ಬಹುತೇಕ ದೇವಸ್ಥಾನಗಳು ಇಂದಿಗೂ ಕೂಡ ಸುಸ್ಥಿತಿಯಲ್ಲಿವೆ. ಇವುಗಳ ಸಾಲಿಗೆ ಹೊಸಂಗಡಿಯ ಮೆಟ್ಕಲ್ ಗುಡ್ಡೆಯ ಮೇಲಿರುವ ದೇವಸ್ಥಾನ ಭಕ್ತರನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಇಂದಿಗೂ ಕೂಡ ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳಗಳು ಕಾಣಸಿಗುತ್ತಿದ್ದು, ಮುಖ್ಯವಾಗಿ ಬಸ್ರೂರು, ಬಾರ್ಕೂರು ಪ್ರದೇಶವನ್ನು ಗಮನಿಸಿದರೆ ಇಂದಿಗೂ ರಾಜ ಮಹಾರಾಜರು ಆಳ್ವಿಕೆ ಮಾಡಿದ, ಅಳಿದುಳಿದ ಕುರುಹುಗಳು ಕಾಣಸಿಗುತ್ತವೆ. ನಗರ ಸಂಸ್ಥಾನದ ಕಾವಲುಕೋಟೆಯಾಗಿದ್ದ ಮೆಟ್ಕಲ್ ಗುಡ್ಡೆಯಲ್ಲಿ ಇತ್ತೀಚೆಗೆ ಸಂಭ್ರಮದ ಜಾತ್ರಾ ಮಹೋತ್ಸವ ನಡೆಯಿತು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ಧಾಪುರ ಸಮೀಪದ ಈ ಹೊಸಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆಟ್ಕಲ್ ಗುಡ್ಡೆಯು ಇಂದಿಗೂ ನಗರ ಸಂಸ್ಥಾನದ ಕಾವಲು ಕೋಟೆಯ ಕಥೆ ಹೇಳುವುದರ ಜೊತೆಗೆ ಅಲ್ಲಿ ಸ್ಥಿತನಾಗಿರುವ ಮಹಾಗಣಪತಿಯು ಭಕ್ತರ ಇಷ್ಟಾರ್ಥ ನೆರವೇರಿಸುವ ದೇವರಾಗಿ ಪ್ರಸಿದ್ಧಿ ಹೊಂದಿದೆ. ಇಂದಿಗೂ ದೇವಸ್ಥಾನದ ಸುತ್ತಲೂ ಇರುವ ಕಾವಲು ಕೋಟೆ ಐತಿಹಾಸಿಕ ಸ್ಥಳದ ಕುರಿತು ಆಸಕ್ತಿ ಮೂಡಿಸುತ್ತದೆ.

ಸಿದ್ಧಾಪುರ ಪೇಟೆಯಿಂದ ಹೊಸಂಗಡಿ ಮೂಲಕ ಸಾಗಿ ವರಾಹಿ ಜಲವಿದ್ಯುತ್ ಕೇಂದ್ರಕ್ಕೆ ತೆರಳುವ ದಾರಿಯಲ್ಲಿ ಸಾಗಿ ಬಂದರೆ ಎತ್ತರ ಗುಡ್ಡೆಯ ಮೇಲೆ ಈ ಮೆಟ್ಕಲ್ ಗುಡ್ಡೆ ಗಣಪತಿ ದೇವಸ್ಥಾನ ಕಾಣಸಿಗುತ್ತದೆ. ಸಾಕಷ್ಟು ಐತಿಹಾಸಿಕ ಹಿನ್ನಲೆ ಇದ್ದರು ಸ್ಥಳೀಯ ಜನರನ್ನು ಹೊರತುಪಡಿಸಿ ಹೊರಗಿನವರಿಗೆ ಮಾಹಿತಿ ಇಲ್ಲದ ಪ್ರದೇಶವಿದು. ಸದ್ಯ ಈ ಜಾಗದ ಬಗ್ಗೆ ಜನರಿಗೆ ಗೊತ್ತಾಗುತ್ತಿದ್ದು, ಎಲ್ಲರನ್ನೂ ಆಕರ್ಷಿಸುತ್ತಿದೆ.
