ನವದೆಹಲಿ: ಇಂಗ್ಲೆಂಡ್‌ನ ‘ಬಾಝ್‌ಬಾಲ್’ ಶೈಲಿಗೆ ಸಡ್ಡು ಹೊಡೆಯುವಂತೆ ಬ್ಯಾಟ್ ಬೀಸಿದ ಭಾರತ ತಂಡ, ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭರ್ಜರಿ 587 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC) ಇತಿಹಾಸದಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. ಅಲ್ಲದೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಹೆಸರಿನಲ್ಲಿದ್ದ ಮಹತ್ವದ ದಾಖಲೆಯನ್ನು ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಹಿಂದಿಕ್ಕಿದೆ.
2022ರಲ್ಲಿ ರಾವಲ್ಪಿಂಡಿಯಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 579 ರನ್ ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಆದರೆ, ಶುಭಮನ್ ಗಿಲ್ ಅವರ ಆಕರ್ಷಕ ದ್ವಿಶತಕ (269 ರನ್)ದ ಬಲದಿಂದ ಭಾರತ ತಂಡ 587 ರನ್ ಗಳಿಸಿ ಹೊಸ ದಾಖಲೆ ಬರೆದಿದೆ.
ಪಾಕಿಸ್ತಾನದ ಪ್ರದರ್ಶನಗಳು
2022ರಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಪಾಕಿಸ್ತಾನ ತಂಡ 75 ರನ್‌ಗಳಿಂದ ಸೋಲು ಅನುಭವಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 657 ರನ್ ಗಳಿಸಿತ್ತು. ನಂತರ ಪಾಕಿಸ್ತಾನಕ್ಕೆ ಪಂದ್ಯ ಗೆಲ್ಲಲು 343 ರನ್‌ಗಳ ಗುರಿ ನೀಡಿತ್ತು. ಈ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ 268 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇಂಗ್ಲೆಂಡ್ ಪರ ಒಲ್ಲಿ ರಾಬಿನ್ಸನ್ ಹಾಗೂ ಜೇಮ್ಸ್ ಆಂಡರ್ಸನ್ ತಲಾ 4 ವಿಕೆಟ್ ಪಡೆದು ಪಾಕಿಸ್ತಾನದ ಬ್ಯಾಟಿಂಗ್ ಬಲವನ್ನು ಕುಗ್ಗಿಸಿದ್ದರು.
ಇದೇ ರೀತಿ, 2024ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ವಿರುದ್ಧ ಮುಲ್ತಾನ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 556 ರನ್ ಗಳಿಸಿತ್ತು. ನಂತರ ಬ್ಯಾಟ್ ಮಾಡಿದ ಇಂಗ್ಲೆಂಡ್, ಜೋ ರೂಟ್ ದ್ವಿಶತಕ (262 ರನ್) ಹಾಗೂ ಹ್ಯಾರಿ ಬ್ರೂಕ್ ಅವರ ತ್ರಿಶತಕ (317 ರನ್)ದ ನೆರವಿನಿಂದ 823 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ 220 ರನ್‌ಗೆ ಆಲ್ ಔಟ್ ಆದ ಪಾಕಿಸ್ತಾನ, ಇನಿಂಗ್ಸ್ ಹಾಗೂ 47 ರನ್‌ಗಳಿಂದ ಸೋಲು ಕಂಡಿತ್ತು.
WTCಯಲ್ಲಿ ಭಾರತದ ವಿದೇಶಿ ನೆಲದ ಸಾಧನೆ
ಐಸಿಸಿ ಆಯೋಜನೆಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ವಿದೇಶಿ ನೆಲದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದೆ. 2024ರಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ, 487 ರನ್ ಗಳಿಸಿದ್ದು ಇದುವರೆಗೆ ಅತ್ಯಧಿಕ ಮೊತ್ತವಾಗಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದರು ಹಾಗೂ ಭಾರತ ತಂಡ 295 ರನ್‌ಗಳ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು.
ವಿದೇಶಿ ನೆಲದಲ್ಲಿ ಭಾರತ ತಂಡ WTCಯಲ್ಲಿ ಗಳಿಸಿದ ಅತಿ ಹೆಚ್ಚು ರನ್‌ಗಳು:
- 587 ರನ್ – ಇಂಗ್ಲೆಂಡ್ ವಿರುದ್ಧ – ಬರ್ಮಿಂಗ್‌ಹ್ಯಾಮ್ – 2025
- 487/6 ರನ್ – ಆಸ್ಟ್ರೇಲಿಯಾ ವಿರುದ್ಧ – ಪರ್ತ್ – 2024
- 471 ರನ್ – ಇಂಗ್ಲೆಂಡ್ ವಿರುದ್ಧ – ಲೀಡ್ಸ್ – 2025