ಕೊಪ್ಪಳ: ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಜನರನ್ನು ಆತಂಕಕ್ಕೆ ದೂಡುತ್ತಿದೆ. ಈ ಮಧ್ಯೆ ರಂಗಭೂಮಿ ಕಲಾವಿದರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳದ ಹವ್ಯಾಸಿ ರಂಗಭೂಮಿ ಕಲಾವಿದ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಸರಿಹಾಳದ ನಿಂಗನಗೌಡ ಎಂಬ 65 ವರ್ಷ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ನಿಂಗನಗೌಡ ಹವ್ಯಾಸದಲ್ಲಿ ರಂಗಭೂಮಿ ಕಲಾವಿದರಾಗಿದ್ದರು. ಇತ್ತೀಚಿಗೆ ಕನಕಗಿರಿ ಜಾತ್ರೆಯಲ್ಲಿ ರಕ್ತ ರಾತ್ರಿ ನಾಟಕದಲ್ಲಿ ಶಕುನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಗುರುವಾರ ರಾತ್ರಿ ಮನೆಯಿಂದ ಹೊರಗಡೆ ಬಂದಾಗ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ರಸ್ತೆಯ ಪಕ್ಕ ಸ್ವಲ್ಪ ಹೊತ್ತು ಮಲಗಿಕೊಂಡಿದ್ದಾರೆ. ಸ್ವಲ್ಪ ಸುಧಾರಿಸಿಕೊಂಡು ಮನೆಗೆ ಹೋಗಿದ್ದಾಗ ಮನೆಯಲ್ಲಿ ಕುಸಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.