ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿರುವ ಮಹಿಳೆಯ ಬಗ್ಗೆ ಕೀಳು ಹೇಳಿಕೆ ನೀಡಿರುವ ಪರಿಷತ್ ಸದಸ್ಯ ರವಿಕುಮಾರ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಚಿವ ಎನ್.ಎಸ್. ಭೋಸರಾಜು ಆಗ್ರಹಿಸಿದ್ದಾರೆ.
ರಾಜ್ಯ ಸರಕಾರದ ಆಡಳಿತಾತ್ಮಕ ಮುಖ್ಯಸ್ಥರಾಗಿರುವಂತಹ ಮುಖ್ಯ ಕಾರ್ಯದರ್ಶಿಗಳು ಹಾಗೂ ಒಬ್ಬ ಮಹಿಳೆಯ ಬಗ್ಗೆ ಕೀಳು ಹೇಳಿಕೆಯನ್ನು ನೀಡಿರುವ ವಿಧಾನಪರಿಷತ ಸದಸ್ಯ ರವಿಕುಮಾರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ವಿಧಾನಪರಿಷತ್ ಸಭಾನಾಯಕ ಎನ್.ಎಸ್. ಭೋಸರಾಜು ಹೇಳಿದ್ದಾರೆ.
ಮಹಿಳೆಯರ ಬಗ್ಗೆ ಅಸಭ್ಯ ಮತ್ತು ಮಾನಹಾನಿಕಾರಕ ಹೇಳಿಕೆ ನೀಡುವುದನ್ನು ರವಿಕುಮಾರ್ ಹವ್ಯಾಸ ಮಾಡಿಕೊಂಡಿದ್ದಾರೆ. ಸಂಸ್ಕೃತಿ ಬಗ್ಗೆ ಗೊಡ್ಡು ಕಾಳಜಿಯನ್ನು ತೋರಿಸುವ ಇವರದ್ದು ಇದೇನಾ ಸಂಸ್ಕೃತಿ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಕಲಬುರ್ಗಿ ಐಎಎಸ್ ಅಧಿಕಾರಿ ವಿರುದ್ದ ನೀಡಿದ ಅವಹೇಳನಕಾರಿ ಹೇಳಿಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಈ ಹಿಂದೆ ದೂರು ಸಲ್ಲಿಸಿದ್ದೇವು. ಈ ಬಾರಿ ರವಿಕುಮಾರ್ ಎಲ್ಲಾ ಅಂಕೆಗಳನ್ನು ಮೀರಿ ಮುಖ್ಯಕಾರ್ಯದರ್ಶಿಗಳ ಮೇಲೆ ಅಸಭ್ಯ ಹೇಳಿಕೆ ನೀಡಿದ್ದಾರೆ. ಇದು ಕೇವಲ ವ್ಯಕ್ತಿಗತ ಅಪಮಾನವಲ್ಲ. ಇಡೀ ಆಡಳಿತ ಯಂತ್ರದ ಶಿಸ್ತು ಮತ್ತು ಐಎಎಸ್ ಸೇವೆಯ ಗೌರವಕ್ಕೆ ಮಾಡಿದ ಅಪಹಾಸ್ಯವಾಗಿದೆ. ಈ ಬಗ್ಗೆ ರಾಜ್ಯಪಾಲರು ಸ್ವಯಂಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.