ಬೆಂಗಳೂರು: ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಇತ್ತೀಚೆಗೆ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಅದರಲ್ಲೂ, ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಪೇಮೆಂಟ್ ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇದರ ಬೆನ್ನಲ್ಲೇ, ಯುಪಿಐ ಸರ್ವರ್ ಮೇಲಿನ ಹೊರೆಯನ್ನು ತಪ್ಪಿಸುವ ದಿಸೆಯಲ್ಲಿ ಯುಪಿಐ ಪೇಮೆಂಟ್ ನಲ್ಲಿ ಹಲವು ಮಾರ್ಪಾಡುಗಳನ್ನು ಜಾರಿಗೆ ತಂದಿದೆ. ಅವುಗಳು ಯಾವವು? ಗ್ರಾಹಕರಿಗೆ ಇದರಿಂದ ಏನು ಅನುಕೂಲ ಎಂಬುದರ ಮಾಹಿತಿ ಇಲ್ಲಿದೆ.
- ಯುಪಿಐ ಪಾವತಿದಾರರೇ, ನೀವು ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ನಿಮ್ಮ ಖಾತೆ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಬಹುದು. ಇದರಿಂದ ಅನಗತ್ಯ ಎಪಿಐ (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಕರೆಗಳನ್ನು ಕಡಿಮೆ ಮಾಡಬಹುದು ಮತ್ತು ಸಿಸ್ಟಮ್ ವೇಗವೂ ಹೆಚ್ಚಾಗುತ್ತದೆ.
- ಸಬ್ ಸ್ಕ್ರಿಪ್ಶನ್ ಅಥವಾ ಚಂದಾದಾರಿಕೆ ಆಧಾರಿತ ಆಟೋ-ಡೆಬಿಟ್ಗಳು (ಅಮೆಜಾನ್, ನೆಟ್ಫ್ಲಿಕ್ಸ್, ಎಸ್ಐಪಿ ಇತ್ಯಾದಿ) ಇನ್ನು ಮುಂದೆ ಕೆಲವು ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ನಡೆಯುತ್ತವೆ. ಬೆಳಿಗ್ಗೆ 10 ಗಂಟೆಯ ಮೊದಲು, ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯ ನಡುವೆ, ಮತ್ತು ರಾತ್ರಿ 9:30 ರ ನಂತರ ಮಾತ್ರ ಆಟೋಪೇ ಪಾವತಿಗಳು ನಡೆಯುತ್ತವೆ.
- ನಿಮ್ಮ ಮೊಬೈಲ್ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆಗಳು ಲಿಂಕ್ ಆಗಿವೆ ಎಂಬುದನ್ನು ದಿನಕ್ಕೆ ಗರಿಷ್ಠ 25 ಬಾರಿ ಮಾತ್ರ ನೋಡಬಹುದು. ಇದಕ್ಕಿಂತ ಹೆಚ್ಚು ಬಾರಿ ನೋಡಲು ಆಗುವುದಿಲ್ಲ.
- ಒಂದು ಪಾವತಿ ಸ್ಥಗಿತಗೊಂಡರೆ, ನೀವು ಅದರ ಸ್ಥಿತಿಯನ್ನು ಗರಿಷ್ಠ ಮೂರು ಬಾರಿ ಮಾತ್ರ ಪರಿಶೀಲಿಸಬಹುದು. ಪ್ರತಿ ಪರಿಶೀಲನೆಯ ನಡುವೆ 90 ಸೆಕೆಂಡುಗಳ ಅಂತರವಿರಬೇಕು.


















