ಮುಂಬೈ: ಮೇಘಾಲಯ ಹನಿಮೂನ್ ಮರ್ಡರ್ ಪ್ರಕರಣವು ದೇಶವನ್ನು ಬೆಚ್ಚಿಬೀಳಿಸಿರುವ ನಡುವೆಯೇ, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಇದೇ ಮಾದರಿಯ ಕೊಲೆಯೊಂದು ನಡೆದಿದೆ. ಕೇವಲ 45 ದಿನಗಳ ಹಿಂದೆ ಮದುವೆಯಾಗಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರ( ಸೋದರಮಾವ)ನ ಜೊತೆ ಸೇರಿ ಗಂಡನನ್ನು ಕೊಲೆಗೈದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೃತ್ಯ ಸ್ಥಳೀಯ ಸಮುದಾಯದಲ್ಲಿ ಆತಂಕ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ.
ಗೂಂಜಾ ಸಿಂಗ್ (19) ಎಂಬ ಯುವತಿಗೆ 45 ದಿನಗಳ ಹಿಂದೆ ಪ್ರಿಯಾಂಶು ಅಲಿಯಾಸ್ ಛೋಟು ಜತೆ ವಿವಾಹವಾಗಿತ್ತು. ಆದರೆ, ಇದಕ್ಕೂ ಮೊದಲೇ ಗೂಂಜಾ ಸಿಂಗ್ ತನ್ನ ಸೋದರಮಾವ ಜೀವನ್‌ನನ್ನು ಪ್ರೇಮಿಸುತ್ತಿದ್ದಳು. ಇವರಿಬ್ಬರ ನಡುವೆ ಅಕ್ರಮ ಸಂಬಂಧವೂ ಇತ್ತು. ಈಗ ಮದುವೆಯಾದ ಕಾರಣ ಸೋದರ ಮಾವನ ಜತೆಗಿನ ತನ್ನ ಸಂಬಂಧಕ್ಕೆ ಪತಿಯು ಅಡ್ಡಬರಬಹುದು ಎಂಬ ಕಾರಣಕ್ಕೆ ಗೂಂಜಾ ಸಿಂಗ್ ತನ್ನ ಸೋದರ ಮಾವ ಜೀವನ್ ಜತೆ ಸೇರಿ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದಳು.
ಇತ್ತೀಚೆಗೆ ಪ್ರಿಯಾಂಶು ಅವರು ತಮ್ಮ ಗ್ರಾಮದಲ್ಲಿ ಬೈಕ್ ನಲ್ಲಿ ಹಿಂದಿರುಗುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಪ್ರಿಯಾಂಶು ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಆರೋಪಿ ಜೀವನ್ ಇದಕ್ಕೆಂದೇ ಕಾಂಟ್ರ್ಯಾಕ್ಟ್ ಶೂಟರ್ ಗಳನ್ನು ನೇಮಿಸಿಕೊಂಡಿದ್ದ. ಗುತ್ತಿಗೆ ಕೊಲೆಗಾರರೇ ಪ್ರಿಯಾಂಶು ಅವರನ್ನು ಅಡ್ಡಗಟ್ಟಿ ಕೊಂದುಹಾಕಿದ್ದರು ಎಂದು ಔರಂಗಾಬಾದ್ ಎಸ್ಪಿ ಅಂಬರೀಶ್ ರಾಹುಲ್ ಹೇಳಿದ್ದಾರೆ.
ಈ ಕೊಲೆ ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ದೂರವಾಣಿ ಕರೆಗಳ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳು, ವಿಶೇಷ ಗುಪ್ತಚರ ಮಾಹಿತಿಯನ್ನು ಪರಿಶೀಲಿಸಿ ಆರೋಪಿಗಳಾದ ಗೂಂಜಾ ಸಿಂಗ್, ಜೀವನ್, ಜಯಶಂಕರ್ ಮತ್ತು ಮುಕೇಶ್ ಶರ್ಮಾರನ್ನು ಬಂಧಿಸಲಾಯಿತು ಎಂದೂ ಎಸ್ಪಿ ರಾಹುಲ್ ತಿಳಿಸಿದ್ದಾರೆ.
ವಿಚಾರಣೆ ವೇಳೆ, ಗೂಂಜಾ ಸಿಂಗ್ ಈ ಕೊಲೆಯ ಸಂಚಿನಲ್ಲಿ ಭಾಗಿಯಾಗಿರುವುದಾಗಿ ಬಾಯಿಬಿಟ್ಟಿದ್ದಾಳೆ. ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದೂ ಎಸ್ಪಿ ಮಾಹಿತಿ ನೀಡಿದ್ದಾರೆ. ಜತೆಗೆ, ಗೂಂಜಾ ಸಿಂಗ್‌ಗೆ ಪ್ರಿಯಾಂಶು ಅವರನ್ನು ವಿವಾಹವಾಗಲು ಮನಸ್ಸಿರಲಿಲ್ಲ. ಆದರೆ, ಅಪ್ಪನ ಒತ್ತಾಯಕ್ಕೆ ಮಣಿದು ಅವರು ಮದುವೆಗೆ ಒಪ್ಪಿದ್ದರು ಎಂದೂ ಅವರು ಮಾಹಿತಿ ನೀಡಿದ್ದಾರೆ.