ಅನಗತ್ಯವಾಗಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡಬೇಡಿ. ವಿನಾಕಾರಣ ಹೇಳಿಕೆಗಳನ್ನು ನೀಡುವ ಕಾರ್ಯವನ್ನು ಈ ಕೂಡಲೇ ನಿಲ್ಲಿಸಿ ಅಂತಾ ಆಳಂದ ಶಾಸಕ ಬಿಆರ್ ಪಾಟೀಲರಿಗೆ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ.
ಮೊನ್ನೆಯಷ್ಟೇ ಸಿದ್ದರಾಮಯ್ಯ ಲಾಟರಿ ಸಿಎಂ ಅಂತಾ ಮಾತನಾಡಿದ್ದ ಬಿ.ಆರ್. ಪಾಟೀಲ್ ವಿರುದ್ಧ ಪಕ್ಷದ ಹೈಕಮಾಂಡ್ ಕೆಂಡಾಮಂಡಲವಾಗಿದೆ. ಈ ಹಿಂದೆ ವಸತಿ ಇಲಾಖೆ ಹಗರದ ವಿಚಾರದಲ್ಲೇ ಬಹಿರಂಗ ಹೇಳಿಕೆ ನೀಡಿದ್ದನ್ನು ಸಹಿಸಿಕೊಂಡಿದ್ದ ವರಿಷ್ಠರು ಈಗ ಬಾಯಿಗೆ ಬೀಗ ಹಾಕಿಕೊಳ್ಳುವಂತೆ ಕಟ್ಟಪ್ಪಣೆ ಮಾಡಿದ್ದಾರೆ.
ಅಷ್ಟೇ ಅಲ್ಲಾ ನಿನ್ನೆ ಬಿ.ಆರ್. ಪಾಟೀಲರಿಗೆ ಕರೆ ಮಾಡಿದ್ದ ರಣದೀಪ್ ಸುರ್ಜೇವಾಲಾ, ನಿಮ್ಮ ಈ ವರ್ತನೆ ಮುಂದುವರಿದರೆ, ಕಠಿಣ ಕ್ರಮಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿದ್ದಾರೆ. ಹೀಗಾಗಿ ಪಾಟೀಲರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.