ಕೊಪ್ಪಳ: ಅಸರೆಯಿಲ್ಲದ ಅಜ್ಜಿಗೆ ಜೆಸ್ಕಾಂ ಸಿಬ್ಬಂದಿ ಆಸರೆಯಾಗಿರುವ ಮನಕಲಕುವ ಘಟನೆಯೊಂದು ನಡೆದಿದೆ.
ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಕಟ್ಟಲಾಗದ ಅಜ್ಜಿಗೆ ಜೆಸ್ಕಾಂ ಸಿಬ್ಬಂದಿ ಆಸರೆಯಾಗಿದ್ದಾರೆ. ಅಜ್ಜಿ ಐದು ಸಾವಿರ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಕಳೆದ ಮೂರು ವರ್ಷಗಳಿಂದಲೂ ಅಜ್ಜಿ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಕೊಪ್ಪಳ ತಾಲೂಕಿನ ಮಾದಿನೂರ ಗ್ರಾಮದ ಅನ್ನಪೂರ್ಣ ಬಡಿಗೇರ ಬಿಲ್ ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ.
ಮನೆಯಲ್ಲಿ ಮಗನಿಗೆ ಆರೋಗ್ಯ ಸರಿ ಇರದ ಹಿನ್ನೆಲೆಯಲ್ಲಿ ವೃದ್ಧೆ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಮಗನೂ ಆಸ್ಪತ್ರೆ ಸೇರಿದ್ದ ಹಿನ್ನಲೆಯಲ್ಲಿ ಚಿಕ್ಕ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು. ಹೀಗಾಗಿ ಬಿಲ್ ಕಟ್ಟಲಾಗದ ಸ್ಥಿತಿಗೆ ಅಜ್ಜಿ ಬಂದು ನಿಂತಿದ್ದರು. ಹೀಗಾಗಿ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಟ್ ಮಾಡುವಂತೆ ಸೂಚಿಸಿದ್ದರು. ಅದರಂತೆ ಇಂದು ವಿದ್ಯುತ್ ಕಟ್ ಮಾಡಲು ಸಿಬ್ಬಂದಿ ಅಜ್ಜಿಯ ಗುಡಿಸಲಿಗೆ ಬಂದಿದ್ದರು. ಆ ವೇಳೆ ಅಜ್ಜಿ ತನ್ನ ಕಷ್ಟ ಹೇಳಿಕೊಂಡಿದ್ದಾರೆ. ಇದರಿಂದ ಮರುಗಿದ ಸಿಬ್ಬಂದಿ, ಅಜ್ಜಿ ಅನ್ನಪೂರ್ಣಾಗೆ ನೆರವಾಗಿದ್ದಾರೆ.
ಅಸಹಾಯಕಳಾಗಿದ್ದ ಅಜ್ಜಿ ಮನೆಯ ಡಬ್ಬದಲ್ಲಿದ್ದ ನಾಲ್ಕು ನೂರು ರೂ. ಹಣವನ್ನು ಕೊಡಲು ಮುಂದಾಗಿದ್ದಳು ಎನ್ನಲಾಗಿದೆ. ಆ ವೇಳೆ ಅಜ್ಜಿಯ ಕಂಡು ಮರುಗಿದ ಸಿಬ್ಬಂದಿ ತಾವೇ ಬಿಲ್ ಕಟ್ಟಿದ್ದಾರೆ. ಸಿಬ್ಬಂದಿ ತಲಾ 500 ರೂ. ಸಂಗ್ರಹ ಮಾಡಿ ವಿದ್ಯುತ್ ಬಿಲ್ ಕಟ್ಟಿದ್ದಾರೆ. ಜೆಸ್ಕಾಂ ಸಿಬ್ಬಂದಿಯ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.