ನವೆಂಬರ್ ವೇಳೆಗೆ ಕಾಂಗ್ರೆಸ್ ಮುಖವಾಡ ಬಯಲಿಗೆ ಬರುತ್ತೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ. ಸಿಎಂ ಹುದ್ದೆ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಸುರ್ಜೆವಾಲ ರಾಜ್ಯಕ್ಕೆ ಬಂದು ರಿಪೇರಿ ಮಾಡುವ ಕೆಲಸ ನಡೆಸಿದ್ದಾರೆ. ಸುರ್ಜೆವಾಲ ಬೆಂಗಳೂರುನಲ್ಲಿದ್ದಾಗಲೇ ಸಿದ್ದರಾಮಯ್ಯ ಲಾಟರಿ ಸಿಎಂ ಅಂತ ಬಿ ಆರ್ ಪಾಟೀಲ್ ಹೇಳುತ್ತಾರೆ.
ಮತ್ತೊಂದು ಕಡೆ ರಾಮನಗರ ಶಾಸಕ ಹುಸೇನ್ ಡಿಕೆಶಿ ಅವರನ್ನು ಮುಂದಿನ ಸಿಎಂ ಮಾಡಬೇಕು ಅಂತಾರೆ. ಡೈರೆಕ್ಟರ್, ಪ್ರೊಡ್ಯೂಸರ್ ಎಲ್ಲರೂ ಅವರೇ. ಒಂದು ಕಡೆ ಸಿದ್ದರಾಮಯ್ಯ ಬಣ, ಮತ್ತೊಂದು ಕಡೆ ಡಿಕೆಶಿ ಬಣ, ತಮ್ಮ ತಮ್ಮ ಬಣದ ಮೂಲಕ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಅನ್ನುವಂತಾಗಿದೆ. ನವೆಂಬರ್ ವೇಳೆಗೆ ಸಿಎಂ ಆಗೋದಾಗಿ ಡಿಕೆಶಿ ಹೇಳುತ್ತಿದ್ದಾರೆ. ಹೀಗಾಗಿ ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಮಹತ್ವದ ಬೆಳವಣಿಗೆ ನಡೆಯುವುದು ಖಚಿತ ಎಂದು ಹೇಳಿದ್ದಾರೆ.