ಬೆಂಗಳೂರು: ಸಿದ್ದರಾಮಯ್ಯ (Siddaramaiah) ಲಾಟರಿ ಸಿಎಂ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಬಿ.ಆರ್. ಪಾಟೀಲ್ ಅವರು ವಸತಿ ಯೋಜನೆಯಲ್ಲಿ ಅಕ್ರಮವಾಗಿ ಎಂದು ಆರೋಪಿಸಿದ್ದರು. ಆನಂತರ ಕೈ ಪಾಳಯದಲ್ಲಿ ದೊಡ್ಡ ಸ್ಫೋಟವೇ ನಡೆದಿತ್ತು. ಹಲವು ಶಾಸಕರು ಕೂಡ ಧ್ವನಿಗೂಡಿಸಿ ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಯತ್ನಿಸಿದರು. ಆದರೆ, ಹೈಕಮಾಂಡ್ ಇಂದು ಅವುಗಳಿಗೆ ಅಂತ್ಯ ಹಾಡಿದೆ. ಈ ಮಧ್ಯೆ ಬಿ.ಆರ್. ಪಾಟೀಲ್ ಅವರದ್ದು ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಈಗ ಅದಕ್ಕೆ ಸಂಬಂಧಿಸಿದಂತೆ ಸ್ವತಃ ಪಾಟೀಲ್ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಮಾಸ್ ಲೀಡರ್. ನನ್ನ ಮತ್ತು ಅವರ ಸಂಬಂಧ ಹಾಳು ಮಾಡಲು ಉದ್ದೇಶಪೂರ್ವಕವಾಗಿ ಯತ್ನ ನಡೆದಿದೆ. ಸೋನಿಯಾ ಗಾಂಧಿಯವರನ್ನು (Sonia Gandhi) ಭೇಟಿ ಮಾಡಲ್ಲ ಎಂದಾಗ ಭೇಟಿ ಮಾಡೋಣ ಎಂದು ಹೇಳಿದ್ದೆ. ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ಸಿದ್ದರಾಮಯ್ಯನವರನ್ನು ನಾವು ಸಿಎಂ ಮಾಡಿಲ್ಲ. ಸಿದ್ದರಾಮಯ್ಯಗೆ ಸಾಥ್ ಕೊಟ್ಟು ನಾನು ಜೆಡಿಎಸ್ (JDS) ತೊರೆದೆ. ನನ್ನ ಮತ್ತು ಸಿದ್ದರಾಮಯ್ಯನವರ ಸಂಬಂಧ ಉದ್ದೇಶಪೂರ್ವಕವಾಗಿ ಹಾಳು ಮಾಡಲು ವಿಡಿಯೋ ಬಿಡುಗಡೆ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.