ಉಡುಪಿ ಜಿಲ್ಲೆಯ ಕಿರಿಮಂಜೇಶ್ವರಿ ಗ್ರಾಪಂ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 2024-25ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳಿಗೆ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಶಾಲೆಯ ಆವರಣದ ಕಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಗ್ರಾಪಂ ವತಿಯಿಂದ ಮಾಡಲಾಗಿದೆ ಎಂದರು. ಅಲ್ಲದೇ, ಶಾಲಾ ಶೈಕ್ಷಣಿಕ ಪರಿಸರ ಹಾಗೂ ಗುಣಾತ್ಮಕ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯ ಮಂಜು ಪೂಜಾರಿ ಮಾತನಾಡಿ, ಕಿರುಮಂಜೇಶ್ವರ ಗ್ರಾಮ ಪಂಚಾಯತಿ ವತಿಯಿಂದ ನಮ್ಮ ಶಾಲೆಗೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಉತ್ತಮ ಶಿಕ್ಷಕರ ದಂಡೆ ನಮ್ಮ ಶಾಲೆಯಲ್ಲಿ ಇದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಅವರ ತಾಯಂದಿರನ್ನು ಸನ್ಮಾನಿಸಲಾಯಿತು. ಎಸ್ ಡಿಎಂಸಿ ಅಧ್ಯಕ್ಷ ಈಶ್ವರ, ಶಾಲಾ ಮುಖ್ಯೋಪಾಧ್ಯಾಯ ಮಂಜು ಪೂಜಾರಿ, ನಾರಾಯಣ ಕೊಡೇರಿ, ಭಾಸ್ಕರ್ ಖಾರ್ವಿ, ಶ್ರೀಕಾಂತ್.ಬಿ, ಅನಿತ, ಮಂಜುನಾಥ.ಕೆ ಗೌಡ ಇದ್ದರು.