350 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಸರ್ಕಾರಿ ಸ್ವಾಮ್ಯದ ಆಸ್ತಿಯನ್ನು ಲಪಟಾಯಿಸಲು ಪ್ರಭಾವಿ ನಾಯಕರೊಬ್ಬರು ಮುಂದಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಎನ್. ಆರ್. ಆರೋಪಿಸಿದ್ದಾರೆ.
ಸರ್ಕಾರಿ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ, ಪಹಣಿ ಕೂರಿಸಿಕೊಳ್ಳುವ ಪ್ರಯತ್ನವನ್ನು ಪ್ರಭಾವಿ ನಾಯಕರು ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 19, 20, 21 ಮತ್ತು 27 ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿಯ ಯಲಚಗುಪ್ಪೆ ರಾಂಪುರ ಗ್ರಾಮದ ಸರ್ವೇ ನಂಬರ್ 4 ರಲ್ಲಿರುವ 61.30 ಎಕರೆಗಳಷ್ಟು ವಿಸ್ತೀರ್ಣದ ಸರ್ಕಾರಿ ಸ್ವತ್ತು ಸದ್ಯ ಮಾರುಕಟ್ಟೆಯಲ್ಲಿ 350 ಕೋಟಿ ರೂ. ಗಳಿಗೂ ಅಧಿಕ ಮೌಲ್ಯ ಹೊಂದಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾಮದ ಸರ್ವೇ ನಂ: 19, 20, 21 ಮತ್ತು 27 ಹಾಗೂ ಯಲಚಗುಪ್ಪೆ ರಾಂಪುರ ಗ್ರಾಮದ ಸರ್ವೆ ನಂ: 4 ರಲ್ಲಿ ಒಟ್ಟು 120.37 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತು ಇದ್ದು, ಇದರ ಪೈಕಿ ಒಟ್ಟು 59.07 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತನ್ನು ವಿವಿಧ ಸರ್ಕಾರಿ ಯೋಜನೆಗಳಿಗೆಂದು ನೀಡಲಾಗಿರುತ್ತದೆ. ಇನ್ನುಳಿದಂತೆ 61.30 ಎಕರೆ ವಿಸ್ತೀರ್ಣದ ಸ್ವತ್ತು ಸಂಪೂರ್ಣವಾಗಿ “ಸರ್ಕಾರಿ ಗೋಮಾಳ”ಪ್ರದೇಶವಾಗಿರುತ್ತದೆ.
ಈ ಸರ್ಕಾರಿ ಸ್ವತ್ತಿನ ಮೇಲೆ ಕಾಕದೃಷ್ಟಿ ಬೀರಿರುವ ಪ್ರಭಾವಿ ರಾಜಕಾರಣಿಯೊಬ್ಬರು ತಮ್ಮ ಬೇನಾಮಿಗಳಾಗಿರುವ ಚನ್ನನರಸಿಂಹಯ್ಯ, ಚಿಕ್ಕ ಹನುಮಂತರಾಯಪ್ಪ ಮತ್ತು ಗಂಗರಾಜು ಎಂಬುವವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೇ, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಸೀಲ್ದಾರ್ ಕಚೇರಿ ಮತ್ತು ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿರುವ ಕೆಲವೊಂದು ಭ್ರಷ್ಟ ಅಧಿಕಾರಿ, ನೌಕರಸ್ಥರ ಸಹಾಯದಿಂದ ಕಾನೂನು ಬಾಹಿರವಾಗಿ “ಪಹಣಿ”ಯನ್ನು ಕೂರಿಸುವ ಕೆಲಸಕ್ಕೆ ಮುಂದಾಗಿದ್ದಾರೆಂದು ಆರೋಪಿಸಿದ್ದಾರೆ.
ಅಷ್ಟರಲ್ಲಾಗಲೇ, ಪ್ರಭಾವೀ ರಾಜಕಾರಣಿಯೊಬ್ಬರ ಪ್ರಭಾವಕ್ಕೆ ಒಳಗಾಗಿ ಲಕ್ಷಾಂತರ ರೂಪಾಯಿ ಲಂಚ ಪಡೆದು ಚನ್ನೇನಹಳ್ಳಿ ಗ್ರಾಮದ ಸರ್ವೆ ನಂ: 21 ರಲ್ಲಿರುವ 04 ಎಕರೆ ಸರ್ಕಾರಿ ಸ್ವತ್ತನ್ನು ಚನ್ನನರಸಿಂಹಯ್ಯ ಬಿನ್ ಗಂಗಪ್ಪ ಎಂಬಾತನ ಹೆಸರಿಗೆ ಪಹಣಿ ಮಾಡಿಕೊಟ್ಟು ಸರ್ಕಾರಕ್ಕೆ ದೊಡ್ಡ ವಂಚನೆಯನ್ನು ಮಾಡಿದ್ದಾರೆ. ಈ ಜಮೀನಿನ ಪ್ರಸಕ್ತ ಮಾರುಕಟ್ಟೆ ಬೆಲೆ ಕನಿಷ್ಟ 24 ಕೋಟಿ ರೂ. ಗೂ ಅಧಿಕವಾಗಿರುತ್ತದೆ. ಈಗಾಗಲೇ ಚನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 19, 20, 21 ಮತ್ತು 27 ಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ ಜೊತೆ ಮೌಖಿಕವಾಗಿ ಮಾತನಾಡಿದ ನಂತರ ಅವರು ಎಲ್ಲಾ ಪ್ರಸ್ತಾವನೆಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.



















