ಉಡುಪಿ: ಬ್ರಹ್ಮಾವರ ತಾಲೂಕು ಕುಂಜಾಲು ಪ್ರದೇಶದ ಬಳಿ ದನದ ರುಂಡ ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮತ್ತೋರ್ವ ಆರೋಪಿ ತಲೆಮೆರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕುಂಜಾಲು ಜಂಕ್ಷನ್ ನಲ್ಲಿ ಹಸುವಿನ ರುಂಡ ಹಾಗೂ ದೇಹದ ಇತರ ಭಾಗಗಳು ಪತ್ತೆಯಾಗಿದ್ದವು. ಕುಂಜಾಲು ಗ್ರಾಮದ ರಾಮಣ್ಣ ಪ್ರಮುಖ ಆರೋಪಿ ಎನ್ನಲಾಗಿದೆ. ಕೇಶವ ಎಂಬವರು ಹಸುವನ್ನು ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಹಸ್ತಾಂತರಿಸಿದ್ದರು ಎನ್ನಲಾಗಿದೆ.
ಸಂದೇಶ್ ಎಂಬುವವರ ಸ್ವಿಫ್ಟ್ ಕಾರಿನಲ್ಲಿ ಹಸುವಿನ ಸಾಗಾಟ ನಡೆದಿತ್ತು. ಕ್ವಾರೆ ಪರಿಸರದಲ್ಲಿ ಪ್ರಸಾದ್, ನವೀನ , ರಾಮಣ್ಣ ಹಸುವನ್ನು ಕಡಿದು ಮಾಂಸ ಮಾಡಿದ್ದರು. ಅವಶೇಷಗಳನ್ನು ದೂರ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ, ಮಾರ್ಗ ಮಧ್ಯೆ ಸ್ಕೂಟರ್ ನಿಂದ ಹಸುವಿನ ತಲೆ ಬಿದ್ದಿದೆ. ಹೀಗಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಕೇಶವ, ರಾಮಣ್ಣ, ನವೀನ್, ಪ್ರಸಾದ್, ರಾಜೇಶ್ ಬಂಧಿತರು ಎನ್ನಲಾಗಿದೆ. ಸದ್ಯ ಓರ್ವ ತಲೆ ಮರೆಸಿಕೊಂಡಿದ್ದಾನೆ. ಪ್ರಕರಣ ನಡೆಯುತ್ತಿದ್ದಂತೆ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ. ಉದ್ದೇಶ ಪೂರ್ವಕವಾಗಿ ಹಸುವಿನ ರುಂಡ ಇಟ್ಟಿಲ್ಲ. ಸಾಗಾಟದ ವೇಳೆ ಅಕಸ್ಮಾತ್ ಬಿದ್ದಿರುವುದು ಗೊತ್ತಾಗಿದೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹ ಹಬ್ಬಿಸಲಾಗಿತ್ತು. ಹೀಗಾಗಿ ಪೋಸ್ಟ್ ಹಾಕುವವರಿಗೆ ಕೂಡ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪೋಲಿಸ್ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿದೆ. ಸೂಕ್ಷ್ಮ ವಿಚಾರಗಳ ಬಗ್ಗೆ ಕೋಮು ಸೂಕ್ಷ್ಮದ ಪೋಸ್ಟ್ ಹಾಕಬೇಡಿ. ಕರಾವಳಿ ಭಾಗದಲ್ಲಿ ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳನ್ನು ಕೊಲೆ ಪ್ರಕರಣದಷ್ಟೇ ಗಂಭೀರವಾಗಿ ಪರಿಗಣಿಸುತ್ತೇವೆ. ಕೋಮುಸೌಹಾರ್ದತೆಗೆ ನಮ್ಮ ಆದ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.