ರಾಜ್ಯದಲ್ಲಿ ಮುಂಗಾರು ರಣಾರ್ಭಟ ಆರಂಭವಾಗಿದೆ. ಅದರಲ್ಲೂ ಕೊಡಗು,ಕರಾವಳಿ ಮಲೆನಾಡಿನಲ್ಲಿ ವರುಣಾರ್ಭಟ ಮೇರೆ ಮೀರಿದೆ.
ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೆ ಅಪಾರ ಒಳ ಹರಿವು ಹರಿದು ಬರುತ್ತಿದೆ. ಕೊಡಗಿನಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ, ಭಾಗಮಂಗಲದ ತ್ರಿವೇಣಿ ಸಂಗಮ ಮತ್ತೆ ಮುಳುಗಡೆಯಾಗಿದೆ. ನಾಪೋಕ್ಲು-ಮೂರ್ನಾಡು ಸಂಪರ್ಕ ಕಡಿತವಾಗದೆ. ಇನ್ನು ಕೆಆರ್ ಎಸ್ ಗೂ 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಜಲಾಶಯ ಬರ್ತಿಗೆ ಇನ್ನು ಕೇವಲ 3 ಅಡಿ ಮಾತ್ರ ಬಾಕಿ ಉಳಿದಿದೆ. ಅತ್ತ ದಕ್ಷಿಣ ಕನ್ನಡದಲ್ಲಿ ಮಳೆ ಮಹಾ ಪರ್ವ ಶುರುವಾಗಿದೆ. ನೇತ್ರಾವತಿ, ಕುಮಾರಧಾರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಶಿವಮೊಗ್ಗದಲ್ಲೂ ಚಂಡಿ ಮಳೆಯಾಗುತ್ತಿದ್ದು, ತುಂಗೆ, ಮಾಲತಿ ನದಿಗಳಲ್ಲಿ ಪ್ರವಾಹ ಉಕ್ಕಿದೆ. ಸದಾ ಪ್ರವಾಸಿಗರನ್ನು ಕೈಬೀಸಿ ಕರೆಯುವ ಬರ್ಕಣ, ಒನಕೆ ಅಬ್ಬಿ ಫಾಲ್ಸ್ ಗಳು ಭೋರ್ಗರೆಯುತ್ತಿವೆ. ಶೃಂಗೇರಿ ಮಠದ ಕಪ್ಪೆ ಶಂಕರ ಮತ್ತೆ ಮುಳುಗಡೆಯಾಗಿದೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲೂ ವರುಣಾರ್ಭಟವಾಗ್ತಿರುವ ಪರಿಣಾಮ ಉತ್ತರ ಕರ್ನಾಟಕದ ಕೃಷ್ಣಾ ಹಾಗೂ ಅದರ ಉಪ ನದಿಗಳಿಗೂ ಜೀವ ಕಳೆ ಬಂದಿದೆ. ಪರಿಣಾಮ ಬೆಳಗಾವಿ ಭಾಗದ 18ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ.