ಮೋಸ, ಮೋಸ…ಮಹಾ ಮೋಸ…. ಕನ್ನಡದ ನೆಲದಲ್ಲಿ ಕನ್ನಡಿಗರಿಗೇ ಅನ್ಯಾಯವಾಗ್ತಿದೆಯಾ? ಈ ಹಿಂದೆ ಹಿಂದಿ ಹೇರಿಕೆ, ಬೆಲೆ ಏರಿಕೆ ನಿಲುವುಗಳಿಂದ ಕನ್ನಡಿಗರ ಕಡುಕೋಪಕ್ಕೆ ತುತ್ತಾಗಿದ್ದ ನಮ್ಮ ಮೆಟ್ರೋ ಇದೀಗ ಮತ್ತೊಂದು ದೊಡ್ಡ ದೋಖಾ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಮ್ಮದೇ ಮಣ್ಣಿನ, ನಮ್ಮದೇ ಸೊಗಡಿನ ಸಂಪತ್ತಿದ್ದಾಗ ಅನ್ಯರಿಗೆ ಮಣೆಹಾಕುವ ಮೂಲಕ ಬಿಎಂಆರ್ ಸಿಎಲ್ ಬೆನ್ನಿಗೆ ಚೂರಿ ಹಾಕುವ ಕಾರ್ಯ ಮಾಡುತ್ತಿದೆ. ಬೆಂಗಳೂರಿನ ಹತ್ತಾರು ಮೆಟ್ರೋ ನಿಲ್ದಾಣಗಳಲ್ಲಿ ಉತ್ತರದ ಅಮುಲ್ ಸಂಸ್ಥೆಯ ಕಿಯೋಸ್ಕ್ ಮಳಿಗೆ ತೆರೆಯಲು ಅನುಮತಿ ನೀಡಿದೆ. ಈ ಬಗ್ಗೆ ತನ್ನ ಮೆಟ್ರೋ ಇನ್ ಸೈಟ್ಸ್ ನಲ್ಲಿ ಬಿಎಂಆರ್ ಸಿಎಲ್ ತಿಳಿಸಿದೆ. ಈ ಮೂಲಕ ಕನ್ನಡ ಮಣ್ಣಿನ ಕೆಎಂಎಫ್ ಗೆ ದಗಾ ಮಾಡುತ್ತಿದೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆಗೆ ಅಸ್ತು
ಗುಜರಾತಿ ಕಂಪನಿ ಜೊತೆ ಬಿಎಂಆರ್ ಸಿಎಲ್ ಒಡಂಬಡಿಕೆ
ಕರ್ನಾಟಕದ ರಾಜಧಾನಿ ಬೆಂಗಳೂರಿನ ಒಡಲಲ್ಲೇ ನಾಡಿನ ಮೂಲದ ಕಂಪನಿಗಳಿಗೆ ಮರಣ ಶಾಸನ ಬರೆದು ಅನ್ಯರಿಗೆ ಕೆಂಪು ಹಾಸಿನ ಸ್ವಾಗತ ನೀಡ್ತಿದೆ ಬಿಎಂಆರ್ಸಿಎಲ್. ಬೆಂಗಳೂರನ 10 ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಅಮುಲ್ ಕಿಯೋಸ್ಕ್ ಮಳಿಗೆಗಳನ್ನು ತೆರೆಯಲು ಒಪ್ಪಂದ ಮಾಡಿಕೊಂಡು ಕನ್ನಡಿಗರ ಹೆಮ್ಮೆ ಕೆಎಂಎಫ್ ಗೆ ಅಪಮಾನ ಎಸಗುತ್ತಿದೆ. ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಲಿಮಿಟೆಡ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವ ಮೆಟ್ರೋ ನಿಲುವು ಕನ್ನಡಗರನ್ನು ಕೆರಳಿಸಿದೆ.
ಕೆಎಂಎಫ್ ಇದ್ದಾಗ ಅಮುಲ್ ಯಾಕೆ ಬೇಕು
ನಮ್ಮ ಮೆಟ್ರೋ ನಿರ್ಧಾರಕ್ಕೆ ಬ್ರೇಕ್ ಹಾಕುತ್ತಾ ಸರ್ಕಾರ
ಅಂತಾರಾಷ್ಟ್ರೀಯ ಕಂಪನಿಗಳ ಪಾರುಪತ್ಯದ ಮುಂದೆ ಇಂದು ಅದೆಷ್ಟೋ ಸ್ವದೇಶಿ ಕಂಪನಿಗಳು ಹೈರಾಣಾಗಿ ಹೋಗಿವೆ. ಆದಾಯವಿಲ್ಲದೆ ಅದೆಷ್ಟೋ ಸಂಸ್ಥೆಗಳು ಬೀಗ ಹಾಕಿವೆ. ಹೀಗಿರುವಾಗ ಕರ್ನಾಟಕದ ಅನ್ನದಾತರ ಶ್ರೇಯೋಭಿವೃದ್ಧಿ ಬಯಸುವ ಕೆಎಂಎಫ್ ಗೆ ಅವಕಾಶ ಮಾಡಿಕೊಡೋ ಬದಲಿಗೆ ಅಮುಲ್ ಗೆ ಅವಕಾಶ ಕೊಟ್ಟಿದ್ದೇಕೆ ಬಿಎಂಆರ್ ಸಿಎಂ ಅನ್ನೋ ಪ್ರಶ್ನೆ ಮೂಡ್ತಿದೆ. ಬೆಂಗಳೂರಿನ ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು, ಜಯನಗರ ಹಾಗೂ ಬನಶಂಕರಿ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ತೆರೆಯಲು ಸಮ್ಮತಿಸಲಾಗಿದೆ. ಹಾಗಿದ್ರೆ ಸದಾ ಕನ್ನಡಾಭಿಮಾನದ ಬಗ್ಗೆ ಮಾತನಾಡೋ ಸಿಎಂ ಸಿದ್ದರಾಮಯ್ಯರಿಗೆ ಈ ವಿಚಾರ ಗೊತ್ತಿಲ್ವಾ. ಕನ್ನಡಿಗರ ಹಿರಿಮೆಯ ಕೆಎಂಎಫ್ ಗೆ ಮೆಟ್ರೋಗಳಲ್ಲಿ ಅವಕಾಶ ಮಾಡಿಕೊಟ್ರೆ ಸಂಸ್ಥೆಗೆ ಮತ್ತೊಂದು ಆದಾಯದ ಮೂಲ ತೆರೆದಂತಾಗುತ್ತೆ. ಈ ಮೂಲಕ ರೈತರಿಗೂ ಹೊಸ ಭರವಸೆಯ ಆಶಾಕಿರಣ ಸಿಕ್ಕಂತಾಗುತ್ತೆ. ಆದ್ರೆ ಗುಜರಾತಿ ಅಮುಲ್ ಗೆ ಆತಿಥ್ಯ ಮಾಡುವ ಬದಲು ಕನ್ನಡಿಗರ ಕೆಎಂಎಫ್ ಗೆ ಮಾನ್ಯತೆ ನೀಡಬೇಕಿದೆ. ಶೀಘ್ರವೇ ಈ ಅಮುಲ್ ಒಪ್ಪಂದ ರದ್ದಾಗಬೇಕಿದೆ. ಮೆಟ್ರೋ ಪ್ರಯಾಣಿಕರಿಗೆ ನಮ್ಮದೇ ನೆಲದ ಸ್ವಾದವಾಗಿರುವ ಕೆಎಂಎಫ್ ನ ಭಾಗ್ಯ ಸಿಗಬೇಕಿದೆ.
















