ಧಾರವಾಡ ಹಾಗೂ ಗದಗ ಜಿಲ್ಲೆಗಳ ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಣ್ಣೆ ಹಳ್ಳದ ಪ್ರವಾಹಕ್ಕೆ ರಸ್ತೆ ಸೇತುವೆ ಕೊಚ್ಚಿ ಹೋಗಿವೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಿಂದ ತಡಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ನರಗುಂದ-ಕುರ್ಲಗೇರಿ-ಗದಗ ಸಂಪರ್ಕ ಸೇತುವೆ ಕಿತ್ತುಹೋಗಿವೆ. ಇದರಿಂದಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ರಸ್ತೆ ದುರಸ್ಥಿ ಮಾಡದೆ ಅಧಿಕಾರಿಗಳು ಮೊಂಡಾಟ ಮೆರೆಯುತ್ತಿದ್ದಾರೆ.
ಕೈಯಲ್ಲಿ ಜೀವ ಹಿಡಿದು ಸೇತುವೆಯ ಇಕ್ಕಟ್ಟಾದ ತಡಗೋಡೆ ಮೇಲೆ ಗ್ರಾಮಸ್ಥರು ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಶಾಲಾ – ಕಾಲೇಜು ವಿದ್ಯಾರ್ಥಿಗಳನ್ನು ಕಳುಹಿಸಲು ಪಾಲಕರು ಭಯಬೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಸೇತುವೆ ಹಾಗೂ ರಸ್ತೆ ದುರಸ್ಥಿ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ



















