ರಾಮನಗರ ಆಯ್ತು ಈಗ ತುಮಕೂರಿನ ಸರದಿ. ಹೌದು, ಇತ್ತೀಚೆಗಷ್ಟೇ ಹಠಕ್ಕೆ ಬಿದ್ದು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಅಂತಾ ಮರುನಾಮಕರಣ ಮಾಡಿದ್ದರು ಡಿಸಿಎಂ ಡಿಕೆ ಶಿವಕುಮಾರ್. ಇದೀಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಜಿದ್ದಿಗೆ ಬಿದ್ದಂತೆ ಕಾಣುತ್ತಿದೆ.
ಹೌದು, ತುಮಕೂರನ್ನು ಬೆಂಗಳೂರಿನೊಟ್ಟಿಗೆ ಬೆಸೆಯುವ ಕಾರ್ಯ ಆರಂಭವಾಗಿದೆ ಎನ್ನುವುದರ ಸುಳಿವು ನೀಡಿದ್ದಾರೆ. ಈ ಮೂಲಕ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಂತಾಗಿದೆ.
ಈ ಕುರಿತು ಮಾತನಾಡಿರುವ ಪರಮೇಶ್ವರ್, ಈಗಾಗಲೇ ಬೆಂಗಳೂರು, ದಿನದಿಂದ ದಿನಕ್ಕೆ ವಿಸ್ತರಿಸುತ್ತಾ ಹೋಗುತ್ತಿದೆ. ಇತ್ತ ಚಿಕ್ಕಬಳ್ಳಾಪುರ, ಅತ್ತ ಕೋಲಾರ, ತುಮಕೂರಿನವರೆಗೂ ವ್ಯಾಪಿಸುತ್ತಿದೆ. ಈಗಾಗಲೇ ಬೆಂಗಳೂರು ನಗರ ನೆಲಮಂಗಲವನ್ನು ದಾಟಿ ಬೆಳೆದಿದೆ. ಅಲ್ಲಿಂದ 30 ಕಿಲೋಮೀಟರ್ ಬಂದರೆ ತುಮಕೂರು ತಲುಪಿಬಿಡಬಹುದು. ಹೀಗಾಗಿ ತುಮಕೂರನ್ನೇ ಬೆಂಗಳೂರು ನಗರ ವ್ಯಾಪ್ತಿಗೆ ತಂದರೆ ಅನುಕೂಲವಾಗುತ್ತೆ.
ಈ ನಿಟ್ಟಿನಲ್ಲೇ 14 ಗ್ರಾಮ ಪಂಚಾಯ್ತಿಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ತರಲು ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ತುಮಕೂರು ನಗರವನ್ನೂ ಇದರ ಅಡಿಯಲ್ಲೇ ತರಲಾಗುತ್ತೆ ಅಂತಾ ಪರಮೇಶ್ವರ್ ಹೇಳಿದ್ದಾರೆ.
ಸಹಜವಾಗಿ ತುಮಕೂರು ಜಿಲ್ಲೆ ಅನ್ನೋದಕ್ಕಿಂತ ಅದನ್ನು ಬೆಂಗಳೂರು ಉತ್ತರ ಅಂದ್ರೆ ನೂಯಾರ್ಕ್ ನಲ್ಲಿರುವವರಿಗೆ ಅರ್ಥವಾಗುತ್ತೆ ಎಂದಿದ್ದಾರೆ. ಈ ಮೂಲಕ ತುಮಕೂರನ್ನು ಭವಿಷ್ಯದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯಾಗಿಸುವ ಮುನ್ಸೂಚನೆ ನೀಡಿದ್ದಾರೆ.



















