ಮಾಲೆ: ಭಾರತದೊಂದಿಗೆ ಕ್ಯಾತೆ ತೆಗೆದು ಪೆಟ್ಟು ತಿಂದಿದ್ದ ಮಾಲ್ಡೀವ್ಸ್‌ಗೆ ಈಗ ಬುದ್ಧಿ ಬಂದಿದೆ. ಭಾರತೀಯರ ಆಕ್ರೋಶಭರಿತ ಪ್ರತಿರೋಧದಿಂದ ಮಣ್ಣುಮುಕ್ಕಿದ್ದ ಮಾಲ್ಡೀವ್ಸ್ ತನ್ನ ಪ್ರವಾಸೋದ್ಯಮಕ್ಕೆ ಮತ್ತೆ ಜೀವ ನೀಡುವ ಸಲುವಾಗಿ ಈಗ ಭಾರತದ ಮುಂದೆ ಮಂಡಿಯೂರಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮಾಲ್ಡೀವ್ಸ್ ಪ್ರವಾಸಿ ತಾಣಗಳಿಗೆ ಜನರನ್ನು ಆಕರ್ಷಿಸುವ ಉದ್ದೇಶದಿಂದ ಬಾಲಿವುಡ್ ಸೂಪರ್ ಸ್ಟಾರ್ ಕತ್ರಿನಾ ಕೈಫ್ ಅವರನ್ನು ತನ್ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕ ಮಾಡಿದೆ.
ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ ನಿಗಮವು ಮಂಗಳವಾರ ಈ ಘೋಷಣೆ ಮಾಡಿದ್ದು, ಭಾರತದ ಸಿನಿಮಾರಂಗದ ಖ್ಯಾತನಾಮರನ್ನು ನಮ್ಮ ಪ್ರವಾಸೋದ್ಯಮದ ರಾಯಭಾರಿಯಾಗಿ ನೇಮಕ ಮಾಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದೆ.
“ನಟಿ ಕತ್ರೀನಾ ಕೈಫ್ ಅವರನ್ನು ನಮ್ಮ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಳ್ಳುತ್ತಿರುವುದು ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ” ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ತೊಯ್ಯಿಬ್ ಮೊಹಮ್ಮದ್ ಹೇಳಿದ್ದಾರೆ. ಕತ್ರೀನಾ ಕೈಫ್ ಅವರ ಜನಪ್ರಿಯತೆ, ಜಾಗತಿಕ ಮನರಂಜನಾ ಉದ್ದಿಮೆಯಲ್ಲಿ ಅವರ ಪ್ರಭಾವವು ಜಗತ್ತಿನಾದ್ಯಂತದ ಪ್ರವಾಸಿಗರನ್ನು ವಿಶೇಷವಾಗಿ ಭಾರತೀಯರನ್ನು ಮಾಲ್ಡೀವ್ಸ್‌ನತ್ತ ಸೆಳೆಯಲು ನಮಗೆ ನೆರವಾಗಲಿದೆ ಎಂಬ ವಿಶ್ವಾಸವಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರೀಕ್ಷಿತ ಮಾಲ್ಡೀವ್ಸ್ ಪ್ರವಾಸದ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ ಈ ಘೋಷಣೆ ನಡೆದಿರುವುದು ಮಹತ್ವ ಪಡೆದಿದೆ.
ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್‌ಗೆ ಭಾರತೀಯ ಉಪಖಂಡದ ಪ್ರವಾಸಿಗರೇ ಮೂಲವಾಗಿದ್ದಾರೆ. ಸ್ಫಟಿಕದಷ್ಟು ಶುಭ್ರವಾದ ನೀರು, ಲಕ್ಸುರಿ ರೆಸಾರ್ಟ್ ಗಳು, ನಯನ ಮನೋಹರ ಬೀಚ್ ಗಳಿಗೆ ಮಾಲ್ಡೀವ್ಸ್ ಹೆಸರುವಾಸಿಯಾಗಿದೆ.
ಇವುಗಳೇ ಭಾರತ ಸೇರಿ ಜಗತ್ತಿನಾದ್ಯಂತದ ಪ್ರವಾಸಿಗರನ್ನು ಮಾಲ್ಡೀವ್ಸ್ ನತ್ತ ಸೆಳೆಯುತ್ತಿವೆ. ಇನ್ನು ಕತ್ರೀನಾ ಕೈಫ್ ಅವರು ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.