ಮೈಸೂರು: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ತಪ್ಪು ಇಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ. ಪೊಲೀಸರು ತಪ್ಪು ಮಾಡಿದರೆ ಸರ್ಕಾರಕ್ಕೆ ಯಾಕೆ ಮುಜುಗರ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stampede Case) ಪೊಲೀಸರು ತಪ್ಪು ಮಾಡಿದ್ದಾರೆ. ಹೀಗಾಗಿ ಆ ಘಟನೆ ನಡೆಯುವಂತಾಯಿತು. ನನಗೆ ಬಂದೋಬಸ್ತ್ ಮಾಡಿದ್ದೇವೆ ಎಂದು ತಿಳಿಸಬೇಕಾದವರು ಯಾರು? ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಏನಾದ್ರೂ ತಿಳಿಸಬೇಕಲ್ವಾ? ಸರ್ಕಾರದ ಮುಖ್ಯ ಕಾರ್ಯದರ್ಶಿಗಾದರೂ ತಿಳಿಸಬೇಕಲ್ವಾ? ಗೃಹ ಸಚಿವರಿಗೂ ಗೊತ್ತಿಲ್ಲ. ನನಗೂ ತಿಳಿಸಿಲ್ಲ. ಇದರಲ್ಲಿ ಅವರದೇ ತಪ್ಪಿದೆ ಎಂದಿದ್ದಾರೆ.
ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ವೈಯಕ್ತಿಕವಾಗಿ ನನಗೆ ಇಡೀ ಸರಕಾರಕ್ಕೆ ಈ ಘಟನೆಯಿಂದ ನೋವಾಗಿದೆ. ನನ್ನ ರಾಜಕೀಯ ಕಾರ್ಯದರ್ಶಿಯನ್ನು ತೆಗೆದು ಹಾಕಲಾಗಿದೆ. ಹೀಗಾಗಿ ನಮಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದಿದ್ದಾರೆ.