ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದ ಬಗ್ಗೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಲ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಘಟನೆ ದುಃಖಕರವಾಗಿದ್ದರೂ, ಈ ಕಾರ್ಯಕ್ರಮವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
“ಈ ಘಟನೆ ತುಂಬಾ ದುಃಖಕರ ಮತ್ತು ದುರಂತವಾಗಿದೆ. ಸಂಭ್ರಮಾಚರಣೆ ದುರಂತವಾಗಿ ಮಾರ್ಪಟ್ಟಿದೆ. ನಾವು ಮೃತರ ಕುಟುಂಬಗಳಿಗೆ ಸಂತಾಪಗಳನ್ನು ಸಲ್ಲಿಸುತ್ತೇವೆ. ಆದರೆ ಬಿಸಿಸಿಐಗೆ ಈ ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ನಿಯಂತ್ರಣವೂ ಇರಲಿಲ್ಲ. ಆದ್ದರಿಂದ ನಮ್ಮ ಮೇಲೆ ಹೊಣೆಗಾರಿಕೆ ಇಲ್ಲ,” ಎಂದು ಧುಮಲ್ ಸ್ಪಷ್ಟಪಡಿಸಿದ್ದಾರೆ.
“ಆರ್‌ಸಿಬಿ ಒಂದು ಫ್ರಾಂಚೈಸಿ. ಅವರನ್ನು ಯಾರು ಆಹ್ವಾನಿಸಿದ್ದರು? ಯಾರು ವ್ಯವಸ್ಥೆ ಮಾಡಿದ್ದರು? ಈ ಪ್ರಶ್ನೆಗಳಿಗೆ ಸ್ಥಳೀಯ ಆಡಳಿತವೇ ಉತ್ತರಿಸಬೇಕು. ಏನು ತಪ್ಪಾಗಿದೆ ಎಂದು ಗುರುತಿಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು,” ಎಂದಿದ್ದಾರೆ.
ಘಟನೆ ನಡೆದ ಬಗ್ಗೆ ಮಾಹಿತಿ ಬಂದ ಕೂಡಲೇ, ಆಯೋಜಕರಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದ್ದಾಗಿ ಧುಮಲ್ ಹೇಳಿದ್ದಾರೆ. “ಆರ್‌ಸಿಬಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದೇನೆ. ಅವರು ಸ್ಟೇಡಿಯಂ ಒಳಗಿದ್ದಾರಂತೆ, ಹೊರಗಡೆ ಏನು ನಡೆಯುತ್ತಿದೆ ಎಂಬ ಮಾಹಿತಿ ಅವರಿಗೆ ಇರಲಿಲ್ಲ. ಮಾಹಿತಿ ದೊರಕುತ್ತಿದ್ದಂತೆ ಅವರು ಕೂಡಲೇ ಕಾರ್ಯಕ್ರಮವನ್ನು ರದ್ದುಪಡಿಸಿದರು,” ಎಂದು ಅವರು ವಿವರಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆ
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ಘಟನೆಯನ್ನು “ದುರ್ಘಟನೆ” ಎಂದು ಬಣ್ಣಿಸಿದ್ದಾರೆ. ಸಂಭ್ರಮಾಚರಣೆಯನ್ನು ಇನ್ನಷ್ಟು ಉತ್ತಮವಾಗಿ ಯೋಜಿಸಬೇಕಿತ್ತು ಎಂದ ಅವರು, “ಕೆಲವು ವೈಫಲ್ಯಗಳು ನಡೆದಿವೆ. ಇದರಲ್ಲಿ ಬಿಸಿಸಿಐ ಯಾವುದೇ ಪಾತ್ರವಿಲ್ಲ. ಆದರೆ ಇದು ಪಾಠವಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ವಿಜಯೋತ್ಸವಗಳಿಗೆ ಹೊಸ ನಿಯಮಗಳನ್ನು ರೂಪಿಸುವ ಬಗ್ಗೆ ನಾವು ಚಿಂತನೆ ಮಾಡುತ್ತೇವೆ,” ಎಂದು ಹೇಳಿದ್ದಾರೆ.
ಆರ್‌ಸಿಬಿ ತಂಡ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆ ನಗರಕ್ಕೆ ಬಂದಿದ್ದಾಗ, ಲಕ್ಷಾಂತರ ಅಭಿಮಾನಿಗಳು ಸ್ಟೇಡಿಯಂ ಬಳಿ ಜಮಾಯಿಸಿದ್ದರು. ಭದ್ರತಾ ವ್ಯವಸ್ಥೆ ವಿಫಲವಾದ ಪರಿಣಾಮ, ಗೇಟು ಮುರಿದು ಜನಸಮೂಹ ಒಳಗೆ ನುಗ್ಗಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ ಮತ್ತು ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಕಾರ್ಯಕ್ರಮವನ್ನು ತಕ್ಷಣವೇ ಮುಕ್ತಾಯಗೊಳಿಸಲಾಗಿದೆ.


















