ಬೆಂಗಳೂರು: ಹಳೆಯ ಪಿಂಚಣಿ ಯೋಜನೆಯನ್ನೇ (ಒಪಿಎಸ್) ಜಾರಿಗೊಳಿಸಬೇಕು ಎಂದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹೋರಾಟ ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಹಳೆಯ ಪಿಂಚಣಿ ಯೋಜನೆಯ ಮರು ಜಾರಿಯ ಪ್ರಸ್ತಾವನೆಯನ್ನು ಪರಿಶೀಲನೆ ಮಾಡಲು ರಾಜ್ಯ ಸರ್ಕಾರವು 3 ತಂಡಗಳನ್ನು ರಚಿಸಿ ಆದೇಶ ಹೊರಡಿಸಿದೆ.
ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ತಲಾ ಮೂವರು ಅಧಿಕಾರಿಗಳು ಅಥವಾ ನೌಕರರನ್ನೊಳಗೊಂಡಂತೆ ಮೂರು ತಂಡಗಳನ್ನು ರಚಿಸಿ ಕಾರ್ಯ ಹಂಚಿಕೆ ಮಾಡಿದೆ. ಸದರಿ ಅಧಿಕಾರಿಗಳು ಅಥವಾ ನೌಕರರು ಪ್ರತಿ ದಿನ ಮಧ್ಯಾಹ್ನ ಕಡ್ಡಾಯವಾಗಿ ಹಾಜರಾಗಿ ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ಗೆ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ಸೂಚನೆ ನೀಡಿದೆ.
ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೊಳಿಸಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗುವ ದಿಸೆಯಲ್ಲಿ ಯೋಜನೆ ರೂಪಿಸಿದೆ. ಆದರೂ, ಕರ್ನಾಟಕದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರರು ಆಗ್ರಹಿಸುತ್ತಿದ್ದಾರೆ. ಬಹು ವರ್ಷಗಳ ಬೇಡಿಕೆಯೂ ಇದೇ ಆಗಿದೆ.
ಸರ್ಕಾರಿ ನೌಕರರ ಬೇಡಿಕೆಗಳನ್ನು ಪೂರೈಸುವ ದಿಸೆಯಲ್ಲಿ ಈಗ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್ಗಢ ಮತ್ತು ಪಂಜಾಬ್ ಸೇರಿ ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಿವೆ. ಹಾಗಾಗಿ, ಕರ್ನಾಟಕದಲ್ಲೂ ಜಾರಿಗೊಳಿಸಬೇಕು ಎಂಬುದು ನೌಕರರ ಆಗ್ರಹವಾಗಿದೆ.