ಗುರ್‌ಗಾಂವ್: ‘ಆಪರೇಷನ್ ಸಿಂದೂರ’ ಕುರಿತ ಪೋಸ್ಟ್‌ಗೆ ಪ್ರತಿಕ್ರಿಯಿಸುವಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶುಕ್ರವಾರ ರಾತ್ರಿ ಪುಣೆಯ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ಎಂಬವರನ್ನು ಗುರ್‌ಗಾಂವ್‌ನಲ್ಲಿ ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಶರ್ಮಿಷ್ಠಾ ಪನೋಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದರು. ಈ ವೀಡಿಯೊದಲ್ಲಿ ನಿರ್ದಿಷ್ಟ ಧರ್ಮವೊಂದರ ಬಗ್ಗೆ “ಅಗೌರವಕರ ಮತ್ತು ಅವಮಾನಕರ” ಟೀಕೆಗಳಿದ್ದವು ಎಂದು ಆರೋಪಿಸಲಾಗಿದೆ. ಈ ವೀಡಿಯೊವನ್ನು ನಂತರ ಡಿಲೀಟ್ ಮಾಡಲಾಗಿದೆಯಾದರೂ, ಅದು ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಪೊಲೀಸರು ಶರ್ಮಿಷ್ಠಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಬಳಿಕ ಶರ್ಮಿಷ್ಠಾ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಲು ಪೊಲೀಸರು ಯತ್ನಿಸಿದರಾದರೂ, ಶರ್ಮಿಷ್ಠಾ ಹಾಗೂ ಅವರ ಕುಟುಂಬ ತಲೆಮರೆಸಿಕೊಂಡಿತ್ತು. ಹೀಗಾಗಿ ಅವರ ವಿರುದ್ಧ ಕೋರ್ಟ್ ಬಂಧನ ವಾರಂಟ್ ಜಾರಿಗೊಳಿಸಿತು. ಈ ವಾರಂಟ್‌ನ ಆಧಾರದ ಮೇಲೆ ಶುಕ್ರವಾರ ರಾತ್ರಿ ಅವರನ್ನು ಗುರ್‌ಗಾಂವ್‌ನಲ್ಲಿ ಬಂಧಿಸಲಾಗಿದೆ.
ಮುಸ್ಲಿಮರು ಹಾಗೂ ಇಸ್ಲಾಂ ವಿರುದ್ಧ ಶರ್ಮಿಷ್ಠಾ ಮಾಡಿರುವ ಪೋಸ್ಟ್ ವಿವಾದ ತಾರಕಕ್ಕೇರಿದ ನಂತರ, ಆಕೆ ಸಾಮಾಜಿಕ ಜಾಲತಾಣದಲ್ಲಿ ಬೇಷರತ್ ಕ್ಷಮಾಪಣೆ ಕೇಳಿದ್ದು, ತಮ್ಮ ವೀಡಿಯೊಗಳು ಹಾಗೂ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. “ನನ್ನ ಪೋಸ್ಟ್ ನನ್ನ ವೈಯಕ್ತಿಕ ಭಾವನೆಗಳಾಗಿದ್ದವು. ಯಾರಿಗೂ ಉದ್ದೇಶಪೂರ್ವಕವಾಗಿ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ.
ಒಂದು ವೇಳೆ ಯಾರಿಗಾದರೂ ಅದರಿಂದ ನೋವಾಗಿದ್ದರೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ನಿಮ್ಮೆಲ್ಲರ ಬೆಂಬಲ, ಸಹಕಾರವನ್ನು ಬಯಸುತ್ತೇನೆ. ಇನ್ನು ಮುಂದೆ, ನಾನು ಸಾರ್ವಜನಿಕ ಪೋಸ್ಟ್‌ಗಳನ್ನು ಹಾಕುವಾಗ ಜಾಗರೂಕತೆ ವಹಿಸುವೆ. ಮತ್ತೊಮ್ಮೆ, ದಯವಿಟ್ಟು ನನ್ನ ಕ್ಷಮಾಪಣೆಯನ್ನು ಸ್ವೀಕರಿಸಿ” ಎಂದು ಅವರು ಟ್ವೀಟ್ ಕೂಡ ಮಾಡಿದ್ದರು.
ಇದೇ ವೇಳೆ, ಶರ್ಮಿಷ್ಠಾ ಅವರ ಬಂಧನವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ದ್ವೇಷ ಭಾಷಣ ನಿಯಂತ್ರಿಸಲು ಅಗತ್ಯವಾದ ಕ್ರಮ ಎಂದು ಬೆಂಬಲಿಸಿದ್ದರೆ, ಇನ್ನೂ ಕೆಲವರು ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆದ ಧಕ್ಕೆ ಎಂದು ಟೀಕಿಸಿದ್ದಾರೆ.
ಶರ್ಮಿಷ್ಠಾ ಅವರು ಪುಣೆಯ ಸಿಂಬಯಾಸಿಸ್ ಕಾನೂನು ಸಂಸ್ಥೆಯಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಕೋಲ್ಕತ್ತಾ ಪೊಲೀಸರು ಯಾವುದೇ ಪೂರ್ವ ಸೂಚನೆಯಿಲ್ಲದೆ ಆಕೆಯನ್ನು ಬಂಧಿಸಿದ್ದಾರೆ ಎಂದೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.



















