ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಕೇವಲ 24 ಗಂಟೆಗಳ ಅವಧಿಯಲ್ಲಿ 10 ಎನ್‌ಕೌಂಟರ್‌ಗಳನ್ನು ನಡೆಸುವ ಮೂಲಕ ಕ್ರಿಮಿನಿಲ್‌ಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಎತ್ತಿಹಿಡಿದಿದೆ. ‘ಆಪರೇಷನ್ ಲಂಗಡಾ’ (ಆಪರೇಷನ್ ಕುಂಟ) ಎಂಬ ಹೆಸರಿನಲ್ಲಿ ಈ ಕಾರ್ಯಾಾಚರಣೆಗಳನ್ನು ನಡೆಸಲಾಗಿದೆ. ಇದರ ಭಾಗವಾಗಿ 24 ಗಂಟೆಗಳಲ್ಲಿ ರಾಜ್ಯದ 8 ನಗರಗಳಲ್ಲಿ ಒಟ್ಟಾರೆ 10 ಎನ್‌ಕೌಂಟರ್ ಗಳನ್ನು ಉತ್ತರಪ್ರದೇಶ ಪೊಲೀಸರು ನಡೆಸಿದ್ದಾರೆ. ಈ ಮೂಲಕ ಕ್ರಿಮಿನಲ್‌ಗಳು ಮತ್ತು ಅಪರಾಧವನ್ನೇ ವೃತ್ತಿಯಾಗಿಸಿಕೊಂಡ ರೌಡಿಗಳಿಗೆ ನಡುಕ ಹುಟ್ಟಿಸಿದ್ದಾರೆ.

24 ಗಂಟೆಗಳಲ್ಲಿ ಆಗಿದ್ದೇನು?
ಆಪರೇಷನ್ ಲಂಗಡಾ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಕ್ರಿಮಿನಲ್‌ಗಳನ್ನು ಒಬ್ಬೊಬ್ಬರನ್ನಾಗಿಯೇ ಬಂಧಿಸತೊಡಗಿದ್ದಾರೆ. 8 ನಗರಗಳಲ್ಲಿ 10 ಎನ್ ಕೌಂಟರ್ ಗಳನ್ನು ನಡೆಸಲಾಗಿದೆ. ಈ ಎನ್ಕೌಂಟರ್‌ಗಳ ಮೂಲಕ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಹಾಗೂ ದೀರ್ಘಾವಧಿಯಿಂದ ಪೊಲೀಸರಿಗೆ ಬೇಕಾಗಿದ್ದ ಹಲವು ಪ್ರಮುಖ ಅಪರಾಧಿಗಳನ್ನು ಬಂಧಿಸಲಾಗಿದೆ. ಲಕ್ನೋದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದ್ದರೆ, ಗಾಜಿಯಾಬಾದ್‌ನಲ್ಲಿ ಪೊಲೀಸ್ ಪೇದೆಯೊಬ್ಬರ ಹತ್ಯೆಯಲ್ಲಿ ಭಾಗಿಯಾದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಶಾಮ್ಲಿಯಲ್ಲಿ 25,000 ರೂ. ಬಹುಮಾನ ಹೊತ್ತಿದ್ದ ಕ್ರಿಮಿನಲ್ ವೊಬ್ಬನನ್ನು ಸೆರೆಹಿಡಿಯಲಾಗಿದೆ. ಬುಲಂದ್‌ಶಹರ್, ಬಾಘ್‌ಪತ್, ಆಗ್ರಾ, ಉನ್ನಾವ್ ಸೇರಿದಂತೆ ವಿವಿಧ ನಗರಗಳಲ್ಲಿ ಕ್ರಿಮಿನಲ್‌ಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕಾರ್ಯಾಚರಣೆಯ ಹೆಸರೇ ಹೇಳುವಂತೆ ಪೊಲೀಸರ ದಾಳಿ ವೇಳೆ ತಪ್ಪಿಸಿಕೊಳ್ಳಲು ಯತ್ನಿಸುವ ಅಥವಾ ಪ್ರತಿರೋಧಿಸುವ ಕ್ರಿಮಿನಲ್‌ಗಳ ಕಾಲುಗಳಿಗೆ ಗುಂಡು ಹಾರಿಸಿ, ಅವರು ಕುಂಟುತ್ತಾ ಸಾಗುವಂತೆ ಮಾಡಲಾಗಿದೆ. ಕ್ರಿಮಿನಲ್‌ಗಳು ಭವಿಷ್ಯದಲ್ಲಿ ಅಪರಾಧಗಳನ್ನು ಎಸಗಲು ಸಾಧ್ಯವಾಗಬಾರದೆಂಬ ಉದ್ದೇಶದಿಂದ ಈ ಕಠಿಣ ನೀತಿಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಿದೆ.
ಈ ಕಾರ್ಯಾಚರಣೆಯ ಫಲವಾಗಿ ಅನೇಕ ಕ್ರಿಮಿನಲ್‌ಗಳು ಅಪರಾಧ ಜಗತ್ತನ್ನು ತೊರೆದು ಸಾಮಾನ್ಯ ಜೀವನ ಆರಂಭಿಸಿದ್ದಾರೆ. ಈ ಕಾರ್ಯತಂತ್ರ ಅಪರಾಧ ನಿಯಂತ್ರಣದಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದ್ದರೂ, ಕಾರ್ಯಶೈಲಿ ಮತ್ತು ನೈತಿಕತೆಯ ಸಂಬಂಧ ಚರ್ಚೆಗೆ ಗ್ರಾಸವಾಗಿದೆ.
ಎನ್ಕೌಂಟರ್ ಗಳ ಪಟ್ಟಿ ಹೀಗಿದೆ:
- ಲಕ್ನೋ: ಅತ್ಯಾಚಾರ ಆರೋಪಿಯ ಬಂಧನ
- ಗಾಜಿಯಾಬಾದ್: ಕೊಲೆ ಆರೋಪಿಯ ಕಾಲಿಗೆ ಗುಂಡು
- ಶಾಮ್ಲಿ: ಗೋವು ಕಳ್ಳಸಾಗಣೆದಾರನ ಎನ್ಕೌಂಟರ್
- ಝಾನ್ಸಿ: ಎನ್‌ಕೌಂಟರ್‌ನಲ್ಲಿ ಕ್ರಿಮಿನಲ್‌ಗೆ ಗಾಯ
- ಬುಲಂದ್‌ಶಹರ್: ರೇಪ್ ಆರೋಪಿಯ ಎನ್ಕೌಂಟರ್
- ಬಾಘ್ ಪಟ್: ದರೋಡೆ ಆರೋಪಿಯ ಬಂಧನ
- ಬಲ್ಲಿಯಾ: ಎಸ್ಕೇಪ್ ಆಗಿದ್ದ ಕ್ರಿಮಿನಲ್ ಕಾಲಿಗೆ ಗುಂಡೇಟು
- ಆಗ್ರಾ: ಕಳ್ಳತನ ಆರೋಪಿ ಜತೆ ಗುಂಡಿನ ಚಕಮಕಿ
- ಜಲೌನ್: ದರೋಡೆ ಆರೋಪಿ ಜತೆ ಎನ್ಕೌಂಟರ್
- ಉನ್ನಾವ್: ಹಿಸ್ಟರಿ ಶೀಟರ್ ಮೇಲೆ ಗುಂಡೇಟು



















