ತಿರುವನಂತಪುರಂ: ಕೇರಳದ(Kerala) ವೆಂಜರಮೂಡು ಸಾಮೂಹಿಕ ಕೊಲೆ(Murder News) ಪ್ರಕರಣದ ಪ್ರಮುಖ ಆರೋಪಿ ಅಫಾನ್ (23) ಪೂಜಪ್ಪುರ ಸೆಂಟ್ರಲ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಆರೋಪಿಯು ಜೈಲಿನ ಸ್ನಾನಗೃಹದಲ್ಲಿ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಕೂಡಲೇ ಅವನನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಜೈಲಿನ ಅಧಿಕಾರಿಗಳ ಪ್ರಕಾರ, ಅಫಾನ್ ಅಂಡರ್‌ಟ್ರಯಲ್ (UT) ಬ್ಲಾಕ್‌ನಲ್ಲಿ ಉನ್ನತ ಮೇಲ್ವಿಚಾರಣೆಯಲ್ಲಿದ್ದ. ಖೈದಿಗಳಿಗೆ ಟೆಲಿವಿಷನ್ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಆತ ಸ್ನಾನಗೃಹಕ್ಕೆ ತೆರಳಿದ್ದು, ದೀರ್ಘಕಾಲ ವಾಪಸ್ ಬಾರದಿರುವುದನ್ನು ಗಮನಿಸಿದ ಜೈಲಿನ ಅಧಿಕಾರಿಯೊಬ್ಬರು ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದಾಗ ಆತನ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣವೇ ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಕೇರಳ ಜೈಲು ಮತ್ತು ಸುಧಾರಣಾ ಸೇವೆ ಇಲಾಖೆಯು ಈ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ.

ಪ್ರೇಯಸಿ ಸೇರಿ ತನ್ನದೇ ಕುಟುಂಬದ 5 ಮಂದಿಯನ್ನು ಕೊಂದಿದ್ದ
ಅಫಾನ್ ಫೆಬ್ರವರಿ 24, 2025ರಂದು ಕೇರಳದ ವೆಂಜರಮೂಡು ತಾಲೂಕಿನ ಮೂರು ವಿಭಿನ್ನ ಸ್ಥಳಗಳಲ್ಲಿ ಐದು ಜನರನ್ನು ಕೊಲೆಗೈದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಕೊಲೆಯಾದವರಲ್ಲಿ ಆತನ 88 ವರ್ಷದ ಅಜ್ಜಿ ಸಲ್ಮಾ ಬೀವಿ, 13 ವರ್ಷದ ಸಹೋದರ ಅಫ್ಸಾನ್, ಚಿಕ್ಕಪ್ಪ ಲತೀಫ್ (69), ಚಿಕ್ಕಮ್ಮ ಶಾಹಿದಾ (59), ಮತ್ತು ಗೆಳತಿ ಫರ್ಜಾನಾ ಕೂಡ ಸೇರಿದ್ದಾರೆ. ಇದರ ಜೊತೆಗೆ, ಆತ ತನ್ನ ತಾಯಿ ಶೆಮೀನಾಳನ್ನೂ ಕೊಲೆಗೈಯಲು ಯತ್ನಿಸಿದ್ದ. ಆದರೆ ಅವರು ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
6 ಗಂಟೆಗಳ ಅವಧಿಯಲ್ಲಿ 3 ಸ್ಥಳಗಳಲ್ಲಿ ಈ ಭೀಕರ ಕೃತ್ಯ ನಡೆದಿತ್ತು. 5 ಮಂದಿಯನ್ನು ಕೊಲೆಗೈದ ನಂತರ, ಅಫಾನ್ ನೇರವಾಗಿ ವೆಂಜರಮೂಡು ಪೊಲೀಸ್ ಠಾಣೆಗೆ ತಾನೇ ತೆರಳಿ ಶರಣಾಗತನಾಗಿದ್ದ. ಆತನ ತಾಯಿಯು ದೀರ್ಘಕಾಲದ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಆತನ ವಿರುದ್ಧ ಒಟ್ಟಾರೆ ಆರು ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ಎರಡೇ ದಿನಗಳಲ್ಲಿ ಅಫಾನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಕಾರಣ
ಪೊಲೀಸರ ತನಿಖೆಯ ಪ್ರಕಾರ, ಈ ಸಾಮೂಹಿಕ ಕೊಲೆಗೆ ಆರ್ಥಿಕ ಸಂಕಷ್ಟವೇ ಮುಖ್ಯ ಕಾರಣವಾಗಿತ್ತು. ಅಫಾನ್‌ನ ಕುಟುಂಬವು ₹65 ಲಕ್ಷದಷ್ಟು ಸಾಲದಲ್ಲಿ ಮುಳುಗಿತ್ತು. ತಂದೆ ಅಬ್ದುಲ್ ರಹೀಂ ಸೌದಿ ಅರೇಬಿಯಾದಲ್ಲಿ ಆರ್ಥಿಕ ಸಂಕಷ್ಟದಿಂದ ಏಳು ವರ್ಷಗಳಿಂದ ಸಿಲುಕಿಕೊಂಡಿದ್ದರು. ಅಫಾನ್ ತನ್ನ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸದ ಕೆಲವು ಸಂಬಂಧಿಕರ ಮೇಲೆ ಕೋಪಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, “ತನಗೇನಾದರೂ ಆದರೆ ಗೆಳತಿ ಫರ್ಜಾನಾ ಒಂಟಿಯಾಗುತ್ತಾಳೆ” ಎಂಬ ಕಾರಣಕ್ಕೆ ಅಫಾನ್ ಆಕೆಯನ್ನೂ ಹತ್ಯೆಗೈದಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಈ ಘಟನೆಯು ಕೇರಳದಲ್ಲಿ ಭಾರೀ ಆಘಾತ ಉಂಟುಮಾಡಿತ್ತು. ಸ್ಥಳೀಯರು ಅಫಾನ್‌ನನ್ನು ಮೃದು ಭಾಷಿ, ಶಾಂತ ಸ್ವಭಾವದ ವ್ಯಕ್ತಿಯೆಂದು ಹೇಳಿದ್ದರೆ, ಇನ್ನೂ ಕೆಲವರು ಆತ ಇತ್ತೀಚಿನ ವರ್ಷಗಳಲ್ಲಿ ಒಂಟಿಯಾಗಿ, ಮೌನವಾಗಿರುತ್ತಿದ್ದ ಎಂದು ತಿಳಿಸಿದ್ದಾರೆ.
ಜೈಲಿನ ಅಧಿಕಾರಿಗಳು ಈ ಆತ್ಮಹತ್ಯೆ ಯತ್ನದ ಕುರಿತು ತನಿಖೆ ಆರಂಭಿಸಿದ್ದಾರೆ. ಇದರ ಜೊತೆಗೆ, ಪೊಲೀಸರು ಈ ಕೊಲೆ ಪ್ರಕರಣದ ಇತರ ಆಯಾಮಗಳ ಬಗ್ಗೆಯೂ ತನಿಖೆಯನ್ನು ಮುಂದುವರೆಸಿದ್ದಾರೆ. ಅಫಾನ್‌ನ ಮಾನಸಿಕ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಮಾನಸಿಕ ಆರೋಗ್ಯ ತಜ್ಞರ ಸಹಾಯವನ್ನು ಕೋರಲಾಗಿದೆ.



















