ನವದೆಹಲಿ: ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಬೇಹುಗಾರಿಕಾ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ಭಾರತೀಯ ಅಧಿಕಾರಿಗಳು, ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಮೂರು ರಾಜ್ಯಗಳ 8 ಜನರನ್ನು ಬಂಧಿಸಿದ್ದಾರೆ. 4 ಮಂದಿಯನ್ನು ಹರ್ಯಾಣದಲ್ಲಿ, 3 ಮಂದಿಯನ್ನು ಪಂಜಾಬ್ ನಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಟ್ರಾವೆಲ್ ಬ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರ ಬಂಧನದ ಬಳಿಕ ಇದೇ ರೀತಿಯ ಯುವ ಇನ್‌ಫ್ಲೂಯೆನ್ಸರ್‌ಗಳನ್ನು ಬಳಸಿಕೊಂಡು ಶತ್ರು ರಾಷ್ಟ್ರವು ಗೂಢಚರ್ಯೆ ನಡೆಸುತ್ತಿರುವ ಬಗ್ಗೆ ಹಿಸಾರ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಸುಲಭವಾಗಿ ಹಣ ಪಡೆಯಲು ಇಂಥವರು ತಪ್ಪು ಹಾದಿ ಹಿಡಿಯುತ್ತಿದ್ದಾರೆ ಎಂದು ಹಿಸಾರ್ ಎಸ್ಪಿ ಶಶಾಂಕ್ ಕುಮಾರ್ ಸಾವನ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಂಧಿತರಾದ ಬೇಹುಗಾರರು:
ಜ್ಯೋತಿ ಮಲ್ಹೋತ್ರಾ
‘ಟ್ರಾವಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಿರ್ವಹಿಸುವ ಪ್ರವಾಸಿ ವ್ಲಾಗರ್ ಜ್ಯೋತಿ ಮಲ್ಹೋತ್ರಾ, ಹರ್ಯಾಣದ ಹಿಸಾರ್‌ನವರು. ಪಾಕಿಸ್ತಾನದೊಂದಿಗೆ ಭಾರತದ ಸೇನಾ ವಿಚಾರವನ್ನು ಹಂಚಿಕೊಂಡ ಆರೋಪದಲ್ಲಿ ಕಳೆದ ವಾರ ಇವರು ಬಂಧಿತರಾಗಿದ್ದಾರೆ. 33 ವರ್ಷದ ಜ್ಯೋತಿ ಪಾಕಿಸ್ತಾನ ಹೈ ಕಮಿಷನ್ ಅಧಿಕಾರಿಯೊಬ್ಬರ ಸಂಪರ್ಕಕ್ಕೆ ಬಂದಿದ್ದು, ಕನಿಷ್ಠ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ಜ್ಯೋತಿ ಅವರನ್ನು ತಮ್ಮ ಬೇಹುಗಾರಿಕಾ ಆಸ್ತಿಯನ್ನಾಗಿ ಬೆಳೆಸಲು ಬಯಸಿದ್ದರು ಎನ್ನಲಾಗಿದೆ.
ದೇವೇಂದರ್ ಸಿಂಗ್
ದೇವೇಂದ್ರ ಸಿಂಗ್ ಧಿಲ್ಲೊನ್, 25, ಪಟಿಯಾಲಾದ ಖಾಲ್ಸಾ ಕಾಲೇಜಿನಲ್ಲಿ ರಾಜಕೀಯಶಾಸ್ತ್ರದ ವಿದ್ಯಾರ್ಥಿ. ಮೇ 12ರಂದು, ಅವರು ಫೇಸ್ಬುಕ್‌ನಲ್ಲಿ ಪಿಸ್ತೂಲು ಮತ್ತು ಬಂದೂಕುಗಳ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಹರ್ಯಾಣದ ಕೈಥಾಲ್‌ನಲ್ಲಿ ಅವರನ್ನು ಬಂಧಿಸಲಾಗಿದೆ. ಅವರ ವಿಚಾರಣೆ ಸಂದರ್ಭದಲ್ಲಿ ನವೆಂಬರ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ಮತ್ತು ಪಟಿಯಾಲಾದ ಸೇನಾ ಕಂಟೋನ್ಮೆಂಟ್ ಚಿತ್ರಗಳನ್ನು ಒಳಗೊಂಡಂತೆ, ಐಎಸ್‌ಐ ಅಧಿಕಾರಿಗಳಿಗೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೆ ಮಾಡಿರುವುದು ಬಹಿರಂಗವಾಗಿದೆ.
ನೌಮನ್ ಇಲಾಹಿ
ಹರ್ಯಾಣದ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನೌಮಮ್ ಇಲಾಹಿ(24) ಇತ್ತೀಚೆಗೆ ಪಾಣಿಪತ್‌ನಿಂದ ಬಂಧಿಸಲಾಗಿದೆ. ಇವರೂ ಪಾಕಿಸ್ತಾನದ ಐಎಸ್ಐ ಹ್ಯಾಂಡ್ಲರ್ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಉತ್ತರಪ್ರದೇಶದ ನಿವಾಸಿಯಾದ ನೌಮನ್ ಗೆ ಇಸ್ಲಾಮಾಬಾದ್‌ಗೆ ಮಾಹಿತಿ ಪೂರೈಸಿದ್ದಕ್ಕಾಗಿ ಪಾಕಿಸ್ತಾನದಿಂದ ಹಣ ಜಮೆಯಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಅರ್ಮಾನ್
23 ವರ್ಷದ ಅರ್ಮಾನ್ ಎಂಬವರನ್ನು ಹರ್ಯಾಣದ ನೂಹ್ ನಲ್ಲಿ ಮೇ 16ರಂದು ಗುಪ್ತಚರ ಮಾಹಿತಿ ಆಧರಿಸಿ ಬಂಧಿಸಲಾಗಿದೆ. ಎರಡೂ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಿದ್ದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ಆರೋಪ ಅರ್ಮಾನ್ ಮೇಲಿದೆ.
ಶೆಹಜಾದ್
ಉತ್ತರಪ್ರದೇಶದ ರಾಂಪುರದ ಉದ್ಯಮಿ. ಭಾನುವಾರ ವಿಶೇಷ ಕಾರ್ಯಪಡೆಯಿಂದ ಮೊರಾದಾಬಾದ್‌ನಲ್ಲಿ ಬಂಧಿತರಾಗಿದ್ದಾರೆ. ಇವರು ತಮ್ಮ ಹ್ಯಾಂಡ್ಲರ್‌ಗಳಿಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಸೂಕ್ಷ್ಮ ವಿಚಾರಗಳನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಹಲವು ಬಾರಿ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದಾರೆ. ಕಾಸ್ಮೆಟಿಕ್‌ಗಳು, ಉಡುಪುಗಳ ಕಳ್ಳಸಾಗಣೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ.
ಮೊಹಮ್ಮದ್ ಮುರ್ತಾಜಾ ಅಲಿ
ಜಲಾಂಧರ್ ನಲ್ಲಿ ಗುಜರಾತ್ ಪೊಲೀಸರು ನಡೆಸಿದ ಶೋಧ ಕಾರ್ಯದ ವೇಳೆ ಮುರ್ತಾಜಾ ಅಲಿ ಸಿಕ್ಕಿಬಿದ್ದಿದ್ದಾರೆ. ಪಾಕಿಸ್ತಾನದ ಐಎಸ್ಐಗೆ ಬೇಹುಗಾರಿಕೆ ನಡೆಸಿದ ಕುರಿತು ಗುಪ್ತಚರ ಮಾಹಿತಿ ಆಧರಿಸಿ ಇವರನ್ನು ಬಂಧಿಸಲಾಗಿದೆ. ತಾನೇ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಷನ್ ಮೂಲಕ ಈತ ತನ್ನ ಕಾರ್ಯವೆಸಗುತ್ತಿದ್ದ. ಅಲಿ ಬಳಿಯಿಂದ 4 ಮೊಬೈಲ್ ಫೋನುಗಳು, 3 ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಇವರಲ್ಲದೇ, ಪಂಜಾಬ್‌ನಲ್ಲಿ ಇದೇ ಮಾದರಿಯ ಆರೋಪದ ಮೇರೆಗೆ ಗಜಾಲಾ ಮತ್ತು ಯಾಮಿನ್ ಮೊಹಮ್ಮದ್ ಎಂಬವರನ್ನೂ ಬಂಧಿಸಲಾಗಿದೆ.



















