ಆನಂದ್ ಗುರೂಜಿಗೆ ಅಕ್ರಮವಾಗಿ ಜಮೀನು ಪಡೆದಿದ್ದೀರಿ ಅಂತಾ ಆರೋಪಿಸಿ ಬ್ಲ್ಯಾಕ್ ಮೇಲ್ ಮಾಡಲಾಗ್ತಿದೆ. ಇತ್ತೀಚೆಗಷ್ಟೇ ಹನಿಟ್ರಾಪ್ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದ ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ಆನಂದ್ ಗುರೂಜಿಯನ್ನು ನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದಾರಂತೆ.

ಸರ್ಕಾರಿ ಜಮೀನನ್ನು ಅಕ್ರಮವಾಗಿ ಪಡೆದಿದ್ದೀರಿ, ವಿಡಿಯೋಗಳಿವೆ ಅಂತಾ ದಿವ್ಯ ವಸಂತ ಮತ್ತು ಕೃಷ್ಣಮೂರ್ತಿ ನಿತ್ಯ ಕಿರುಕುಳ ನೀಡ್ತಿದ್ದಾರಂತೆ. ಈ ಬಗ್ಗೆ ಬೇಸತ್ತ ಆನಂದ್ ಗುರೂಜಿ ಇದೀಗ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ. ಹಣಕ್ಕಾಗಿ ಕಾರು ಅಡ್ಡಗಟ್ಟಿ ಅಶ್ಲೀಲ ಪದಗಳಿಂದ ಈ ಇಬ್ಬರು ಆರೋಪಿಗಳು ನಿಂದಿಸಿದ್ದಾರೆ ಅಂತಲೂ ಗುರೂಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಇದ್ರೂ ಯುಟ್ಯೂಬ್ ಚಾನಲ್ ಗಳಾದ ಮುಖವಾಡ ಮತ್ತು ಸಾಮ್ರಾಟ್ ನಲ್ಲಿ ಗುರೂಜಿ ಚಾರಿತ್ಯವಧೆ ಮಾಡಲಾಗುತ್ತಿದೆಯಂತೆ. ಗುರೂಜಿ ಪತ್ನಿ ಹಾಗೂ ಮಕ್ಕಳ ವಿರುದ್ಧವೂ ಅಶ್ಲೀಲ ಪದ ಬಳಸಿ ಸುಳ್ಳುಸುದ್ದಿಗಳನ್ನು ಬಿತ್ತರಿಸಲಾಗ್ತಿದೆಯಂತೆ.

ಈ ಬಗ್ಗೆ ದೂರಿನಲ್ಲಿ ವಿವರವಾಗಿ ಉಲ್ಲೇಖಿಸಿರುವ ಆನಂದ್ ಗುರೂಜಿ ತಡೆಯಾಜ್ಞೆಗೂ ಕ್ಯಾರೆ ಎನ್ನದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಚಿಕ್ಕಜಾಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.