ಚಂಡೀಗಢ: ರಾತ್ರೋರಾತ್ರಿ ಪಾಕ್ ನಡೆಸಿದ ದುಸ್ಸಾಹಸಕ್ಕೆ ಭಾರತವು ಮೂರೂ ಪಡೆಗಳ ಮೂಲಕ ತಕ್ಕ ಉತ್ತರ ನೀಡಿದ್ದರೂ ಪಾಕ್ ಮಾತ್ರ ನಾಯಿ ಬಾಲ ಡೊಂಕು ಎಂಬಂತೆ ವರ್ತಿಸುತ್ತಿದೆ. ಇಂದು ಬೆಳಗ್ಗೆ ಚಂಡೀಗಢದಲ್ಲಿ ಸುಮಾರು ಒಂದು ಗಂಟೆ ಕಾಲ ವೈಮಾನಿಕ ದಾಳಿಯ ಸೈರನ್ ಮೊಳಗಿದ್ದು (India-Pak War), ಪಾಕಿಸ್ತಾನದಿಂದ ಮತ್ತೆ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ವಾಯುಪಡೆ ನಿಲ್ದಾಣದಿಂದ ಮಾಹಿತಿ ಬಂದಿದೆ. ಜೊತೆಗೆ ಪಾಕ್‌ಗೆ ಸರಿಯಾಗಿ ಉತ್ತರಿಸಲು ಮೂರೂ ಪಡೆಗಳು ಸಜ್ಜಾಗಿ ನಿಂತಿವೆ.
“ಒಂದು ಗಂಟೆ ಕಾಲ ಸೈರನ್ ಮೊಳಗಿದ್ದು, ಪ್ರತಿಯೊಬ್ಬರೂ ಮನೆಗಳ ಒಳಗೇ ಇರುವಂತೆ ಹಾಗೂ ಯಾರೂ ಹೊರಗೆ ಅಥವಾ ಬಾಲ್ಕನಿಗೆ ಬರಬೇಡಿ” ಎಂದು ಚಂಡೀಗಢ ಆಡಳಿತವು ನಾಗರಿಕರಿಗೆ ಸೂಚಿಸಿದೆ. ಗುರುವಾರ ಸಂಜೆಯೂ ಇದೇ ರೀತಿಯ ಸೈರನ್ ಮೊಳಗಿದ್ದು, ಎಲ್ಲೆಡೆ ಬ್ಲ್ಯಾಕ್ಔಟ್ ಘೋಷಿಸಲಾಗಿತ್ತು. ಇದಕ್ಕೂ ಮುನ್ನ ಜಮ್ಮು-ಕಾಶ್ಮೀರದ ಮೇಲೆ ಪಾಕಿಸ್ತಾನ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತ್ತು. ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಶೆಲ್ ದಾಳಿಯೂ ನಡೆದಿತ್ತು.
ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚಂಡೀಗಢದ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಶನಿವಾರದವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಚಂಡೀಗಢ ಉಪ ಆಯುಕ್ತ ನಿಶಾಂತ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಇಂದು ಬೆಳಿಗ್ಗೆಯೇ ವೈಮಾನಿಕ ದಾಳಿಯ ಎಚ್ಚರಿಕೆ ಸೈರನ್‌ಗಳು ಚಂಡೀಗಢದಾದ್ಯಂತ ಮೊಳಗಿದವು. ಇದರ ಬೆನ್ನಲ್ಲೇ ನಾಗರಿಕರಿಗೆ ಎಚ್ಚರಿಕೆಯಿಂದಿರಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಸೂಚಿಸಲಾಗಿದೆ. ನಿನ್ನೆ ರಾತ್ರಿಯೂ ಸಂಭವನೀಯ ವೈಮಾನಿಕ ದಾಳಿಯಿಂದ ರಕ್ಷಣೆಗಾಗಿ, ಚಂಡೀಗಢ, ಮೊಹಾಲಿ, ಮತ್ತು ಪಂಚಕುಲದಲ್ಲಿ ಬ್ಲ್ಯಾಕ್‌ಔಟ್ ಆದೇಶವನ್ನು ಜಾರಿಗೊಳಿಸಲಾಯಿತು.
ನಿವಾಸಿಗಳಿಗೆ ದೀಪಗಳನ್ನು ಆರಿಸಲು, ವಿದ್ಯುತ್ ಬ್ಯಾಕಪ್‌ಗಳನ್ನು ಬಳಸದಿರಲು ಮತ್ತು ಬೀದಿಗಿಳಿಯದಂತೆ ಸೂಚಿಸಲಾಯಿತು.
ಇದೇ ವೇಳೆ ಕೆಲವು ಪ್ರದೇಶಗಳಲ್ಲಿ ಸೈರನ್‌ಗಳ ಶಬ್ದ ಸ್ಪಷ್ಟವಾಗಿರಲಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಇದರ ಪರಿಹಾರಕ್ಕಾಗಿ 30 ಹೆಚ್ಚುವರಿ ಸೈರನ್‌ಗಳನ್ನು ಖರೀದಿಸುವ ಯೋಜನೆಯಿದೆ ಎಂದು ಚಂಡೀಗಢದ ಉಪ ಆಯುಕ್ತ ನಿಶಾಂತ್ ಕುಮಾರ್ ಯಾದವ್ ಹೇಳಿದ್ದಾರೆ.
ಪಾಕಿಸ್ತಾನವು ನಿನ್ನೆ ರಾತ್ರಿ ಆರ್ ಎಸ್ ಪುರ, ಅರ್ನಿಯಾ, ಸಾಂಬಾ ಮತ್ತು ಹಿರಾನಗರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. ಆದರೆ, ಭಾರತೀಯ ಸುದರ್ಶನ ಚಕ್ರವು (ವೈಮಾನಿಕ ರಕ್ಷಣಾ ವ್ಯವಸ್ಥೆ) ಪಾಕ್‌ನ ಪ್ರತಿಯೊಂದು ಕ್ಷಿಪಣಿಗಳನ್ನೂ ಹೊಡೆದುರುಳಿಸಿದೆ. ರಾಜಸ್ಥಾನದ ಜೈಸಲ್ಮೇರ್, ಪಂಜಾಬ್‌ನ ಅಮೃತಸರ ಮತ್ತು ಹರ್ಯಾಣದ ಪಂಚಕುಲದಲ್ಲಿ ನಿನ್ನೆ ಬ್ಲ್ಯಾಕ್ ಔಟ್ ಮಾಡಲಾಗಿತ್ತು.