ಬೆಂಗಳೂರು: ಜೀವ ವಿಮೆ, ಆರೋಗ್ಯ ವಿಮೆ, ಟರ್ಮ್ ಇನ್ಶೂರೆನ್ಸ್… ಹೀಗೆ ಬದಲಾದ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಇಷ್ಟೆಲ್ಲ ವಿಮೆಗಳನ್ನು ಮಾಡಿಸಬೇಕಾಗುತ್ತದೆ. ಅನಿಶ್ಚಿತತೆಯ ಬದುಕು, ಸಣ್ಣ ವಯಸ್ಸಿಗೇ ಕಾಯಿಲೆಗಳು ಆವರಿಸುವುದು, ದಿಢೀರನೆ ಬಂದೆರಗುವ ಸಾವು ಸೇರಿ ಹಲವು ಕಾರಣಗಳಿಂದಾಗಿ ವಿಮೆ ಮಾಡಿಸುವುದು ಅತ್ಯವಶ್ಯಕವಾಗಿದೆ. ಆದರೆ, ವಿಮೆ ಮಾಡಿಸುವ ಮುನ್ನ ಹಾಗೂ ಮಾಡಿಸಿದ ನಂತರ ಜನ ಒಂದಷ್ಟು ಕ್ರಮಗಳನ್ನು ಪಾಲಿಸಿದರೆ, ಕ್ಲೇಮ್ ಸುಲಭವಾಗುತ್ತದೆ.
ಟರ್ಮ್ ಲೈಫ್ ಇನ್ಶೂರೆನ್ಸ್, ಹೋಲ್ ಲೈಫ್ ಇನ್ಶೂರೆನ್ಸ್, ಎಂಡೋಮೆಂಟ್ ಪ್ಲಾನ್, ಯುಲಿಪ್ ಪ್ಲಾನ್, ಮನಿ ಬ್ಯಾಕ್, ಚೈಲ್ಡ್ ಇನ್ಶೂರೆನ್ಸ್ ಸ್ಕೀಂ… ಹೀಗೆ ಜೀವ ವಿಮೆಗಳಲ್ಲಿ ಹಲವು ಮಾದರಿಗಳಿವೆ. ಆದರೆ, ಕಡಿಮೆ ಬೆಲೆಗೆ ಹೆಚ್ಚು ಕವರೇಜ್ ಕೊಡುವ ಇನ್ಶೂರೆನ್ಸ್ ಮಾದರಿ ಅಂದರೆ ಟರ್ಮ್ ಇನ್ಶೂರೆನ್ಸ್. ಎಂಡೋಮೆಂಟ್, ಮನಿ ಬ್ಯಾಕ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಜತೆಗೆ ಹೂಡಿಕೆಯೂ ಸೇರಿಕೊಂಡಿರುತ್ತದೆ. ಟರ್ಮ್ ಇನ್ಶೂರೆನ್ಸ್ ಪಡೆದಿರುವ ಕುಟುಂಬದ ಯಜಮಾನ ಅಥವಾ ಯಜಮಾನಿ ಆಕಸ್ಮಿಕವಾಗಿ ಮೃತಪಟ್ಟರೆ, ಆ ಕುಟುಂಬಕ್ಕೆ ಹಣಕಾಸಿನ ನೆರವನ್ನು ಇನ್ಶೂರೆನ್ಸ್ ಕಂಪನಿ ಒದಗಿಸುತ್ತದೆ.
ಗಮನಿಸಲೇಬೇಕಾದ ಸಂಗತಿಗಳು
- ಸಮಯಕ್ಕೆ ಸರಿಯಾಗಿ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಸಬೇಕು. ಪ್ರೀಮಿಯಂ ಪಾವತಿ ವಿಳಂಬ ಮಾಡಿದರೆ ಅಥವಾ ಕಟ್ಟದಿದ್ದರೆ ಕ್ಲೇಮ್ ಸಿಗುವುದಿಲ್ಲ.
- ಲೈಫ್ ಇನ್ಶೂರೆನ್ಸ್ ಇರಲಿ, ಟರ್ಮ್ ಇನ್ಶೂರೆನ್ಸ್ ಪಡೆಯುವಾಗಲೇ ಆಗಲಿ, ಅರ್ಜಿಯಲ್ಲಿ ನಿಮಗೆ ಈಗಾಗಲೇ ಏನಾದರೂ ಅನಾರೋಗ್ಯದ ಸಮಸ್ಯೆಗಳಿದ್ದರೆ ತಿಳಿಸಬೇಕು. ಇಲ್ಲದಿದ್ದರೆ ಕ್ಲೇಮ್ ಅರ್ಜಿ ತಿರಸ್ಕಾರಗೊಳ್ಳುತ್ತದೆ.
- ಇನ್ಶೂರೆನ್ಸ್ ಪಡೆದಿರುವ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿ. ಪಾಲಿಸಿ ಸಂಖ್ಯೆ, ನಾಮಿನಿ ಸೇರಿ ಎಲ್ಲ ಮಾಹಿತಿಯನ್ನು ನೀಡಿರಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಕ್ಲೇಮ್ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ.
- ವಿಮೆ ಮಾಡಿಸುವಾಗ ನಾಮಿನಿಯ ಹೆಸರು, ವಯಸ್ಸು ಮುಂತಾದ ವಿವರಗಳನ್ನು ಸರಿಯಾಗಿ ನೀಡಬೇಕು.
ಕ್ಲೇಮ್ ಸಲ್ಲಿಸುವುದು ಹೇಗೆ?
ಇನ್ಶೂರೆನ್ಸ್ ಪಡೆದಿರುವ ವ್ಯಕ್ತಿ ಮೃತಪಟ್ಟ ಬಳಿಕ ಎಷ್ಟು ಸಾಧ್ಯವೋ ಅಷ್ಟು ಬೇಗ ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕು. ಸಾಮಾನ್ಯವಾಗಿ ಇನ್ಶೂರೆನ್ಸ್ ಕಂಪನಿಗಳು ವ್ಯಕ್ತಿ ಮೃತಪಟ್ಟ 30 ದಿನದ ಒಳಗಾಗಿ ಕ್ಲೇಮ್ ಪ್ರಕ್ರಿಯೆ ಜಾರಿಗೊಳಿಸುವಂತೆ ಸೂಚಿಸುತ್ತವೆ. ಆದರೆ, ಒಂದು ಕಂಪನಿಯಿಂದ ಮತ್ತೊಂದಕ್ಕೆ ಈ ದಿನಗಳ ಮಿತಿ ಬದಲಾಗುತ್ತದೆ.
ವಿಮೆ ಹೊಂದಿರುವ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಇನ್ಶೂರೆನ್ಸ್ ಕಂಪನಿಗೆ ಗ್ರಾಹಕ ಸೇವಾ ಕೇಂದ್ರದ ಮೂಲಕ, ವಿಮಾ ಕಚೇರಿಗೆ ಭೇಟಿ ನೀಡುವ ಮೂಲಕ ಅಥವಾ ಇ- ಮೇಲ್ ಮೂಲಜ ಮಾಹಿತಿ ನೀಡಬಹುದು. ಏಜೆಂಟರ ಮೂಲಕವೂ ಮಾಹಿತಿ ನೀಡಬಹುದು. ಇನ್ಶೂರೆನ್ಸ್ ಕ್ಲೇಮ್ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಎನ್ನುವ ಮಾಹಿತಿ ನಿರ್ದಿಷ್ಟ ಇನ್ಶೂರೆನ್ಸ್ ಕಂಪನಿಗಳ ವೆಬ್ ಸೈಟ್ ನಲ್ಲಿ ಇರುತ್ತದೆ.