ಬೆಂಗಳೂರು: ದೇಶದ ಗ್ರಾಮೀಣ ಬ್ಯಾಂಕಿಂಗ್ ಕ್ಷೇತ್ರವು ಇಂದಿನಿಂದ ಮಹತ್ವದ ಬದಲಾವಣೆ ಕಾಣಲಿದೆ. ಕೇಂದ್ರ ಸರ್ಕಾರವು ಒಂದು ರಾಜ್ಯ-ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೀತಿಗೆ ಹಸಿರು ನಿಶಾನೆ ತೋರಿಸಿದೆ. ಇದರ ಅನ್ವಯ ಮೇ 1 ರಿಂದ 15 ಗ್ರಾಮೀಣ ಬ್ಯಾಂಕುಗಳು ವಿಲೀನಗೊಳ್ಳಲಿವೆ. ಇದರಿಂದ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ ಗ್ರಾಹಕರ ಮೇಲೆ ಯಾವ ಪರಿಣಾಮ ಬೀರಬಹುದು? ಏನೆಲ್ಲ ಬದಲಾವಣೆ ಆಗಬಹುದು ಎಂಬುದರ ಮಾಹಿತಿ ಇಲ್ಲಿದೆ.
15 ಬ್ಯಾಂಕುಗಳ ವಿಲೀನದಿಂದಾಗಿ ದೇಶಾದ್ಯಂತ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 43 ರಿಂದ 28 ಕ್ಕೆ ಇಳಿಯಲಿದೆ. ವಿಲೀನಗೊಳ್ಳಲಿರುವ 15 ಬ್ಯಾಂಕುಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು- ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದ ಗ್ರಾಮೀಣ ಬ್ಯಾಂಕುಗಳು ಸೇರಿವೆ. ಬ್ಯಾಂಕುಗಳ ವಿಲೀನವು ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಏಕೀಕೃತ IFSC ಮತ್ತು MICR ಕೋಡ್ಗಳನ್ನು ಹೊಂದಿರುವುದು ವಹಿವಾಟುಗಳನ್ನು ಸುಲಭಗೊಳಿಸುತ್ತದೆ ಮತ್ತು ಸಾಲ ಪ್ರಕ್ರಿಯೆ ಸುಲಭವಾಗುತ್ತದೆ.
ಗ್ರಾಹಕರ ಮೇಲೆ ಏನು ಪರಿಣಾಮ?
ಬ್ಯಾಂಕುಗಳ ವಿಲೀನದಿಂದಾಗಿ ಗ್ರಾಹಕರು ಕೆಲವು ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಆದರೆ ಠೇವಣಿ, ಉಳಿತಾಯ ಅಥವಾ ಸಾಲಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬ್ಯಾಂಕುಗಳ ವಿಲೀನವು ಕೆಲವು ಪೇಪರ್ ವರ್ಕ್ ಗಳನ್ನು ಹೆಚ್ಚಿಸಬಹುದು. ಅವರ ಬ್ಯಾಂಕ್ ಹೆಸರು ಮತ್ತು IFSC ಕೋಡ್ ಬದಲಾಗಬಹುದು. ವಿಲೀನದ ನಂತರ ರೂಪುಗೊಂಡ ಹೊಸ ಬ್ಯಾಂಕಿನ ಪಾಸ್ ಬುಕ್ ಮತ್ತು ಚೆಕ್ ಬುಕ್ ಅನ್ನು ಪಡೆಯಬೇಕಾಗುತ್ತದೆ.
ಖಾತೆದಾರರ ಹಳೆಯ ಗ್ರಾಹಕ ಐಡಿ ಅಥವಾ ಖಾತೆ ಸಂಖ್ಯೆಯಲ್ಲಿಯೂ ಬದಲಾವಣೆಗಳಾಗಬಹುದು. ವಿಶೇಷವೆಂದರೆ ಬ್ಯಾಂಕುಗಳ ವಿಲೀನವು ಅವರ ಖಾತೆಗಳಲ್ಲಿ ಜಮಾ ಮಾಡಲಾದ ಹಣ, ಬ್ಯಾಂಕ್ ಬ್ಯಾಲೆನ್ಸ್, ಎಫ್ ಡಿ, ಆರ್ ಡಿ ಅಥವಾ ಸಾಲದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾಯ್ದೆ, 1976ರ ಸೆಕ್ಷನ್ 23 ಎ (1) ರ ಅಡಿಯಲ್ಲಿ ಗ್ರಾಮೀಣ ಬ್ಯಾಂಕುಗಳನ್ನು ನೀಡಲಾದ ಅಧಿಕಾರಗಳ ಅಡಿಯಲ್ಲಿ ಒಂದೇ ಘಟಕವಾಗಿ ಸಂಯೋಜಿಸಲಾಗುತ್ತದೆ. ಕರ್ನಾಟಕದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗಳು ವಿಲೀನಗೊಂಡು ಒಂದೇ ಆಗಲಿದೆ. ಹೀಗೆಯೇ ದೇಶದ 15 ಬ್ಯಾಂಕುಗಳ ವಿಲೀನವಾಗುತ್ತದೆ.



















