ನವದೆಹಲಿ: ಕೆನಡಾದಲ್ಲಿ ವ್ಯಾಸಂಗ ಮಾಡಲೆಂದು ತೆರಳಿದ್ದ ಭಾರತದ 21 ವರ್ಷದ ವಿದ್ಯಾರ್ಥಿನಿ ಹರ್ಸಿಮ್ರತ್ ಕೌರ್ ರಾಂಧವಾ ಹ್ಯಾಮಿಲ್ಟನ್‌ನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾಳೆ. ಯಾವುದೋ ಎರಡು ಗುಂಪುಗಳ ನಡುವಿನ ಜಗಳದ ವೇಳೆ ರಸ್ತೆ ಬದಿ ನಿಂತಿದ್ದ ರಾಂಧವಾ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾಳೆ. ಪಂಜಾಬ್ ಮೂಲದ ರಾಂಧವಾ ಮೃತದೇಹವನ್ನು ಭಾರತಕ್ಕೆ ತರಲು ನೆರವಾಗುವಂತೆ ಅವರ ಕುಟುಂಬ ಕೇಂದ್ರ ಸರ್ಕಾರವನ್ನು ಕೋರಿದೆ.
“ಹರ್ಸಿಮ್ರತ್ ಕೌರ್ ರಾಂಧವಾ ಎರಡು ವರ್ಷಗಳ ಹಿಂದೆ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗಿದ್ದಳು. ಘಟನೆ ನಡೆದಾಗ ಆಕೆ ಹ್ಯಾಮಿಲ್ಟನ್ ನ ರಸ್ತೆ ಬದಿಯಲ್ಲಿ ಹೋಗುತ್ತಿದ್ದಳು. ಅದೇ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು ಗುಂಡಿನ ದಾಳಿ ಆರಂಭವಾಯಿತು. ರಸ್ತೆ ಬದಿ ನಿಂತಿದ್ದ ರಾಂಧವಾ ಅವರ ಎದೆಗೆ ನೇರವಾಗಿ ಒಂದು ಗುಂಡು ಹೊಕ್ಕಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಳು” ಎಂದು ಹೇಳಲಾಗಿದೆ. ಪಂಜಾಬ್‌ನ ತಾರ್ನ್ ತರಣ್ ಜಿಲ್ಲೆಯ ಧುಂಡಾ ಗ್ರಾಮದ ರಾಂಧವಾ ಅವರ ಕುಟುಂಬವು ಆಕೆಯ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
ಪೊಲೀಸರು ಹೇಳಿದ್ದೇನು?
ಏಪ್ರಿಲ್ 17ರ ಸಂಜೆ ರಾಂಧವ ಅವರ ಹತ್ಯೆಯಾಗಿದೆ ಎಂದು ಹ್ಯಾಮಿಲ್ಟನ್ ಪೊಲೀಸರು ದೃಢಪಡಿಸಿದ್ದಾರೆ. ಸುಮಾರು ಸಂಜೆ 7:30ರ ಸುಮಾರಿಗೆ, ಅಪ್ಪರ್ ಜೇಮ್ಸ್ ಸ್ಟ್ರೀಟ್ ಮತ್ತು ಸೌತ್ ಬೆಂಡ್ ರೋಡ್ ಈಸ್ಟ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ಎದೆಗೆ ಗುಂಡೇಟು ಬಿದ್ದು ಯುವತಿಯೊಬ್ಬಳು ರಸ್ತೆ ಬದಿ ಬಿದ್ದಿದ್ದಾಳೆ ಎಂಬ ಮಾಹಿತಿ ಸಿಕ್ಕಿದೊಡನೆ ನಾವು ಅಲ್ಲಿಗೆ ಧಾವಿಸಿದ್ದು, ಕೂಡಲೇ ಅವಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ರಾಂಧವ ಅವರು ಮೊಹಾವ್ಕ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದಳು. ಎರಡು ವಾಹನಗಳಲ್ಲಿ ಬಂದವರ ನಡುವಿನ ಘರ್ಷಣೆಯು ಗುಂಡಿನ ಚಕಮಕಿಗೆ ತಿರುಗಿದ ವೇಳೆ, ರಸ್ತೆಬದಿಯಲ್ಲಿದ್ದ ಈಕೆಗೆ ಗುಂಡು ತಾಕಿತು. ಈಕೆ ಅಮಾಯಕಿ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ಕೆಲವು ಗುಂಡುಗಳು ಪಕ್ಕದಲ್ಲೇ ಇದ್ದ ಮನೆಯೊಂದರ ಕಿಟಕಿಯನ್ನೂ ಪ್ರವೇಶಿಸಿದವು. ಮನೆಯೊಳಗೆ ಕುಟುಂಬ ಸದಸ್ಯರು ಟಿವಿ ವೀಕ್ಷಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆದರೆ ಒಳಗಿದ್ದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಗುಂಡಿನ ದಾಳಿಯ ಬೆನ್ನಲ್ಲೇ ಎರಡೂ ಕಾರುಗಳಲ್ಲಿದ್ದ ದುಷ್ಕರ್ಮಿಗಳಿದ್ದ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಹ್ಯಾಮಿಲ್ಟನ್ ಪೊಲೀಸರು ತಿಳಿಸಿದ್ದಾರೆ.
“ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿ ಭಾರತೀಯ ವಿದ್ಯಾರ್ಥಿ ಹರ್ಸಿಮ್ರತ್ ರಾಂಧವ ಅವರ ದುರಂತ ಸಾವಿನಿಂದ ನಾವು ತೀವ್ರ ದುಃಖಿತರಾಗಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ, ಅಮೆರಿಕದ ರಾಯಭಾರ ಕಚೇರಿಯು ರಾಂಧವಾಳ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ಅಗತ್ಯವಾದ ಕಾನ್ಸುಲರ್ ಬೆಂಬಲವನ್ನು ಒದಗಿಸುತ್ತಿದೆ ಎಂದು ಹೇಳಲಾಗಿದೆ.