ಬೆಂಗಳೂರು: ಗೂಗಲ್, ಮೈಕ್ರೋಸಾಫ್ಟ್ ನಂತಹ ಜಾಗತಿಕ ಐಟಿ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿವೆ. ಅಮೆರಿಕ ಆರ್ಥಿಕ ಹಿಂಜರಿತದ ಭೀತಿ ಸೇರಿ ಹಲವು ಕಾರಣಗಳಿಂದಾಗಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಇಂತಹ ಪರಿಸ್ಥಿತಿಯ ಬೆನ್ನಲ್ಲೇ, ದೇಶದಲ್ಲಿ ಇನ್ಫೋಸಿಸ್, ವಿಪ್ರೋ ಸೇರಿ ಮೂರು ದೈತ್ಯ ಕಂಪನಿಗಳು 2025-26ನೇ ಹಣಕಾಸು ವರ್ಷದಲ್ಲಿ ಸಾವಿರಾರು ಫ್ರೆಶರ್ ಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿವೆ.
ಟಿಸಿಎಸ್ ನಿಂದ 42 ಸಾವಿರ ಜನರ ನೇಮಕ
ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ 42 ಸಾವಿರ ಫ್ರೆಶರ್ ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಘೋಷಣೆ ಮಾಡಿದೆ. ಹಾಗೆ ನೋಡಿದರೆ, 2024-25ನೇ ಸಾಲಿನಲ್ಲಿ 1.1 ಲಕ್ಷ ಉದ್ಯೋಗಿಗಳಿಗೆ ಟಿಸಿಎಸ್ ಬಡ್ತಿ ನೀಡುವುದಿಲ್ಲ ಎಂದು ಘೋಷಿಸಿದೆ. ಹಾಗೆಯೇ, ನೌಕರರ ಸಂಬಳ ಹೆಚ್ಚಿಸುವುದನ್ನೂ ಮುಂದೂಡಿದೆ. ಇದರ ಮಧ್ಯೆಯೂ, ಫ್ರೆಶರ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿರುವುದು ಫ್ರೆಶರ್ ಗಳಿಗೆ ಶುಭ ಸುದ್ದಿಯಾಗಿದೆ.
ಇನ್ಫೋಸಿಸ್ ನಿಂದ 20 ಸಾವಿರ ಜನರಿಗೆ ಉದ್ಯೋಗ
ಇನ್ಫೋಸಿಸ್ ಕಂಪನಿಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ 20 ಸಾವಿರ ಫ್ರೆಶರ್ ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ. ಇತ್ತೀಚೆಗೆ ಇನ್ಫೊಸಿಸ್ ಉದ್ಯೋಗಿಗಳನ್ನು ವಜಾಗೊಳಿಸಿ ಸುದ್ದಿಯಲ್ಲಿತ್ತು. ಇದರ ಮಧ್ಯೆಯೇ, 20 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ.
ಇದರ ಜತೆಗೆ ವಿಪ್ರೋ ಕಂಪನಿಯೂ ಫ್ರೆಶರ್ ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ. 2024-25ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ವಿಪ್ರೋ 612 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು. ಒಟ್ಟಿನಲ್ಲಿ, ದೇಶದ ದೈತ್ಯ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿರುವುದು ಈಗಷ್ಟೇ ಪದವಿ ಮುಗಿಸಿದವರಿಗೆ ಒಳ್ಳೆಯ ಅವಕಾಶಗಳು ಸಿಗುವಂತೆ ಮಾಡಲಿದೆ.



















