ಮುಂಬೈ ಕನಸಿನ ಮಾಯಾ ಲೋಕದಲ್ಲಿ ತಮ್ಮದೇ ಮನೆ ಹೊಂದುವುದು ಸಾಮಾನ್ಯನಿಂದ ಹಿಡಿದು ಆಗರ್ಭ ಶ್ರೀಮಂತರವರೆಗೂ ಒಂದು ದೊಡ್ಡ ಕನಸು. ಅದರಲ್ಲೂ ದಶಕಗಳಿಂದ ಬಾಲಿವುಡ್ ನಲ್ಲಿ ದುಡಿದವರಿಗಂತೂ ಹೊಸ ನಿವಾಸವೆನ್ನುವುದು ಹೆಬ್ಬಯಕೆ. ಈ ಸಾಲಿಗೀಗ ಕನ್ನಡತಿ ದೀಪಿಕಾ ಪಡಕೋಣೆ ಸೇರ್ಪಡೆಯಾಗುತ್ತಿದ್ದಾರೆ. ಮುಂಬೈನ ಪ್ರತಿಷ್ಠಿತ ಬಾಂದ್ರಾ ಪ್ರದೇಶದಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ಹೊಸ ಮನೆ ಗೃಹಪ್ರವೇಶಕ್ಕೆ ಸಜ್ಜಾಗಿದ್ದಾರೆ.
100 ಕೋಟಿ ವೆಚ್ಚದ ಹೊಸ ಮನೆಗೆ ಶಿಫ್ಟ್
ಬಾಲಿವುಡ್ ನ ಅತಿರಥ ದಿಗ್ಗಜರು ನೆಲೆಸಿರುವ ಪ್ರದೇಶವದು. ಬಾಂದ್ರಾ ವೆಸ್ಟ್ ಅಂದರೆ, ಮೊದಲಿಗೆ ನೆನಪಿಗೆ ಬರುವುದೇ ಶಾರುಖ್ ಖಾನ್. ಶಾರುಕ್ ರ ಮನ್ನತ್ ನಿವಾಸದಿಂದ ಕೂಗಳತೆ ದೂರದಲ್ಲೇ ಈಗ ದೀಪಿಕಾ-ರಣವೀರ್ ತಮ್ಮ ಮನೆ ಖರೀದಿಸಿದ್ದಾರೆ .ಸಮುದ್ರಮುಖಿಯಾಗಿರುವ ಈ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನ 16ರಿಂದ 19ನೇ ಅಂತಸ್ತಿನ ಒಟ್ಟು ನಾಲ್ಕು ಫ್ಲೋರ್ ಗಳನ್ನು ತಮ್ಮ ಕುಟುಂಬಕ್ಕಾಗಿ ಖರೀಸಿದ್ದಾರೆ ದೀಪಿಕಾ.
100 ಕೋಟಿ ವೆಚ್ಚದ ಈ ಮನೆಯನ್ನು ಅತ್ಯಾಧುನಿಕ ಇಂಟೀರಿಯರ್ ಗಳನ್ನು ಬಳಸಿ ಸಿಂಗರಿಸಲಾಗಿದೆ. ಬರೋಬ್ಬರಿ 11.266 ಚದುರಡಿಯ ಈ ವಿನ್ಯಾಸದಲ್ಲಿ ಆಧುನಿಕ ಯುಗದ ಎಲ್ಲ ಸವಲತ್ತುಗಳಿವೆ. ಅಷ್ಟೇ ಅಲ್ಲಾ 1300 ಚದುರಡಿಯ ತಾರಸಿ ಕೂಡಾ ರಣವೀರ್ ದಂಪತಿಗಳ ಪಾಲಾಗಿದೆ. ಈ ಹೊಸ ಮನೆಗೆ ಶೀಘ್ರವೇ ತಮ್ಮ ಪುತ್ರಿ ದುವಾ ಜೊತೆ ರಣವೀರ್ ದಂಪತಿ ಪ್ರವೇಶ ಮಾಡಲಿದ್ದಾರೆ.
ಅಲಿಬಾಗ್ ನಲ್ಲಿದೆ 21 ಕೋಟಿ ಮೌಲ್ಯದ ಮನೆ
ಹಾಗೆ ನೋಡಿದರೆ, ರಣವೀರ್ ಮತ್ತು ದೀಪಿಕಾ 2018ರಲ್ಲಿ ಇಟಲಿಯಲ್ಲಿ ಸಪ್ತಪದಿ ತುಳಿದಿದ್ದರು. ತೀರಾ ಇತ್ತೀಚೆಗೆ ಅಂದ್ರೆ 2024ರ ಸೆಪ್ಟಂಬರ್ ನಲ್ಲಿ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಯಾವಾಗ ದುವಾ ಆಗಮನವಾಯ್ತೋ ಆಗಲೇ ದಂಪತಿ ಹೊಸ ಮನೆಗೆ ಶಿಫ್ಟ್ ಆಗೋ ಪ್ಲ್ಯಾನ್ ಮಾಡಿದ್ದರು. ಹೀಗಾಗಿಯೇ ಇದೀಗ ಕಡೆಗೂ ಹೊಸ ಮನೆ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿಯಾದಂತಾಗಿದೆ. ಅಷ್ಟೇ ಅಲ್ಲಾ ಮುಂಬೈನ ಅಲಿಬಾಗ್ ನಲ್ಲಿ ದೀಪಿಕಾ 21 ಕೋಟಿ ಬೆಲೆಯ ಬೃಹತ್ ಬಂಗಲೆ ಹೊಂದಿದ್ದಾರೆ. ಒಟ್ಟಿನಲ್ಲಿ ಹೊಸ ಮನೆ ಪ್ರವೇಶಕ್ಕೆ ಅಣಿಯಾಗಿರುವ ಕನ್ನಡತಿಗೆ ಅವರ ಅಭಿಮಾನಿಗಳೀಗ ಶುಭ ಕೋರುತ್ತಿದ್ದಾರೆ.


















